ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ತಪ್ಪು ಕಲ್ಪನೆಯಿಂದ ಸೌಲಭ್ಯ ವಂಚನೆ'

Lingaraj Badiger
Updated On : 24 Aug 2013, 11:02 am

ಕ.ಪ್ರ.ವಾರ್ತೆ, ಸೊರಬ, ಆ. 23 ಅಡಕೆ ಬೆಳೆಗಾರರು ಶ್ರೀಮಂತರೆಂಬ ತಪ್ಪು ಕಲ್ಪನೆ ಮೂಡಿದ್ದರಿಂದ ಆತ ಸಮುದಾಯದ ಸೌಲಭ್ಯದಿಂದ ವಂಚಿತನಾಗುವಂತಾಗಿದೆ ಎಂದು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ತಿಳಿಸಿದರು.
ಸಾರ್ವಜನಿಕ ಹಿತರಕ್ಷಣಾ ವೇದಿಕೆ, ಗೋ ಸಂರಕ್ಷಣಾ ವೇದಿಕೆ, ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ, ಇವರು ಪ್ರಸಕ್ತ ಅತಿವೃಷ್ಟಿಯಿಂದಾಗಿ ನಾಶವಾಗಿರುವ ಅಡಕೆ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಕರೆದಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.
ಸಂಕಷ್ಟದಲ್ಲಿ ಅಡಕೆ ಬೆಳೆಗಾರ: ಅಡಕೆ ಬೆಳೆಗಾರ ಪ್ರಸ್ತುತ ನಾಲ್ಕಾರು ವರ್ಷಗಳಿಂದ ಹಲವಾರು ಸಂಕಷ್ಟಗಳಿಗೆ ಸಿಲುಕಿ ತತ್ತರಿಸಿದ್ದಾನೆ. ಈಗ ಅತಿವೃಷ್ಟಿಯಿಂದ ವರ್ಷದ ಕೂಳಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಆತನಿಗೆ ಸರ್ಕಾರದ ಕನಿಷ್ಠ ಸಾಂತ್ವನ ಕೂಡ ದೊರಕಿಲ್ಲ. ಮೊದಲಿನಿಂದಲೂ ಅಡಕೆ ಬೆಳೆಗಾರ ಸರ್ಕಾರದ ಸೌಲಭ್ಯ ವಿಚಾರದಲ್ಲಿ ಅಸ್ಪೃಶ್ಯನಂತೆ ಬಾಳಿ ಬದುಕಿದ್ದು, ನೋವು, ದುಗುಡ ನುಂಗುತ್ತ ಬಂದಿದ್ದಾನೆ. ಇಂದೂ ಸಹಾ ಆತ ಮೌನ ವಹಿಸಿದರೆ ಬೀದಿಗೆ ಬೀಳುವಂತಹ ಪರಿಸ್ಥಿತಿ ಬಂದಿದೆ. ಈಗಾಲಾದರೂ ಸರ್ಕಾರ ಎಚ್ಚೆತ್ತು ಅವನ ಇಂತಹ ಸಂಕಷ್ಟ ಸಮಯದಲ್ಲಿ ಸಹಕರಿಸಿ ಚೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಗತ್ಯ ಸೌಲಭ್ಯ: ಜಿಪಂ ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ ಮಾತನಾಡಿ, ಈ ವರ್ಷದ ಮಳೆಗಾಲದಲ್ಲಿ ಬಹುತೇಕ ಅಡಕೆ ಬೆಳೆ ನೆಲಕಂಡಿದ್ದು, ಕೊನೆಕಾರರನ್ನು ಹುಡುಕುವ ಪ್ರಮೇಯವೆ ಇಲ್ಲ. ಇಂತಹ ವೇಳೆ ಬೆಳೆಗಾರನಿಗೆ ಸರ್ಕಾರದ ಸಾಂತ್ವನ ಅವಶ್ಯವಿದೆ. ಅಗತ್ಯ ಸೌಲಭ್ಯ ಒದಗಿಸಬೇಕಿದೆ ಎಂದರು.
ಜಿಪಂ ಸದಸ್ಯ ಗುರುಕುಮಾರ್ ಪಾಟೀಲ್ ಮಾತನಾಡಿ, ಸಮಗ್ರ, ಸಮರ್ಪಕ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಬೇಕು, ಗೋರಕ್ ಸಿಂಗ್ ವರದಿ ಜಾರಿಯಾಗಬೇಕು. ಸರ್ಕಾರ ಕೂಡಲೆ ಎಚ್ಚೆತ್ತು ಪರಿಹಾರ ಕಾರ್ಯಕ್ಕೆ ಮುಂದಾಗದಿದ್ದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದ ಬಳಿಕ ತಹಸೀಲ್ದಾರ್ ಕಚೇರಿ ಎದುರು ಕೊಳೆರೋಗ ತಗುಲಿದ ಅಡಿಕೆ ಸುರಿದು ಪ್ರತಿಭಟನಾ ಸಭೆ ನಡೆಸಿದರು. ಬಳಿಕ ತಹಸೀಲ್ದಾರರ ಮೂಲಕ ಶೀಘ್ರ ಪರಿಹಾರ ದೊರಕಿಸಿಕೊಡಲು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಮಾತನಾಡಿ, ಈಗಾಗಲೇ ತಾಲೂಕಿನ ಅಡಕೆ ಬೆಳೆಗಾರರ ಪರಿಹಾರಕ್ಕೆಂದು ರು. 2.25ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಧಿಕಾರಿಗಳೇ ಖುದ್ದು ಪರಿಶೀಲನೆ ನಡೆಸಿ ಶೇ.70 ಭಾಗ ಅಡಕೆ  ಬೆಳೆ ನಾಶಗೊಂಡಿರುವ ಕುರಿತು ಸಮಗ್ರ ವರದಿ ಸಲ್ಲಿಸಲಾಗಿದೆ.
ಕೊಳೆ ರೋಗ ನಿಯಂತ್ರಣ ಕುರಿತಂತೆ ಗಹನ ಚರ್ಚೆಯೂ ನಡೆದಿದೆ. ಈ ವೇಳೆ ಅಗತ್ಯ ಮಾಹಿತಿ ನೀಡುವ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಬೆಳೆಗಾರರಿಗೆ ಸೂಚಿಸಿದರು.
ಪಿಎಲ್‌ಡಿಸಿಬಿ ಅಧ್ಯಕ್ಷ ಅಣ್ಣಾಜಿಗೌಡ, ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಬಂಗಾರಸ್ವಾಮಿ, ಗುರುಪ್ರಸನ್ನಗೌಡ ಬಾಸೂರು, ಮಂಜುನಾಥ ಹೆಗಡೆ ಬಾಸೂರು, ಲಕ್ಷ್ಮಣಪ್ಪ ಕೊಡಕಣಿ, ದಾನಶೇಖರ್ ಅಂತನಹಳ್ಳಿ, ಬರಿಗೆ ನಾಗರಾಜ್, ದಾಕ್ಷಾಯಣಿ, ನಿಸರಾಣಿ ಶ್ರೀಪಾದ ಹೆಗಡೆ, ಸತೀಶ್ ಜೋಯ್ಸ್, ವಿರೇಂದ್ರಗೌಡ, ಅಡಕೆ  ಬೆಳೆಗಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement