ಬಿಜೆಪಿಯೊಂದಿಗಿನ ಮೈತ್ರಿ ಶಾಶ್ವತವಲ್ಲ
ಕ.ಪ್ರ.ವಾರ್ತೆ, ಸಾಗರ, ಆ.23
ಬಿಜೆಪಿಯೊಂದಿಗಿನ ಮೈತ್ರಿ ಮಂಡ್ಯ ಹಾಗೂ ಬೆಂಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮಾತ್ರ ಸೀಮಿತವೇ ಹೊರತು ಶಾಶ್ವತ ಅಲ್ಲ ಎಂದು ಕಡೂರು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಶುಕ್ರವಾರ ಸಾಗರಕ್ಕೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಉಪಚುನಾವಣೆ ನಡೆದಿರುವ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ನೆಲೆ ಇಲ್ಲ. ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳುವುದು ಏಕೆ ಎನ್ನುವ ಉದ್ದೇಶದಿಂದ ಬಿಜೆಪಿ ನಾಯಕರು ನಮಗೆ ಚುನಾವಣೆಯಲ್ಲಿ ಸಹಾಯ ಮಾಡಿದ್ದಾರೆ ಎಂದರು.
ಜೆಡಿ(ಎಸ್) ಪ್ರಾದೇಶಿಕ ಪಕ್ಷವಾಗಿದ್ದು, ಹಿಂದಿನಿಂದಲೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಸಮಾನ ದೂರದಲ್ಲಿಯೇ ಇರಿಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿಯೂ ಈ ಅಂತರವನ್ನು ಕಾಯ್ದುಕೊಳ್ಳಲಾಗುವುದು. ಜಾತ್ಯಾತೀತ ತತ್ವದ ಬಗ್ಗೆ ಕಾಂಗ್ರೆಸ್ ನಮಗೆ ಪಾಠ ಹೇಳುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಗೆ ಅರ್ಹತೆಯಿಲ್ಲ: 1999ರಿಂದ 2004ರ ವರೆಗೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕೇಸರಿ ಪಕ್ಷದ ಬೆಳವಣಿಗೆಯಾಗಿದೆ. ಚಿಕ್ಕಮಗಳೂರುನಲ್ಲಿರುವ ಬಾಬಾ ಬುಡನಗಿರಿಯಲ್ಲಿ ಶೋಭಾಯಾತ್ರೆ ನಡೆಸಬಾರದು ಎಂದು ಜೆಡಿಎಸ್ ವಿರೋಧ ವ್ಯಕ್ತಪಡಿಸಿದ್ದಾಗಲೂ ಸ್ವತಃ ಕಾನೂನು ಸಚಿವರೇ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಜೆಡಿಎಸ್ ಬಗ್ಗೆ ಮಾತನಾಡುವ ಅರ್ಹತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಹೇಳಿದರು.
ಈ ಬಾರಿ ಸುರಿದ ವಿಪರೀತ ಮಳೆಯಿಂದ ಅಡಕೆಗೆ ವ್ಯಾಪಕ ಕೊಳೆರೋಗ ಬಂದು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಇವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕು. ಕಾಫಿ ಬೆಳೆಗಾರರಿಗೆ ನೀಡುವಂತೆ ಅಡಕೆ ಬೆಳೆಗಾರರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮಾತು ಮರೆತ ಮೊಯ್ಲಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ 15 ದಿನಗಳೊಳಗಾಗಿ ಗೋರಕ್ಸಿಂಗ್ ವರದಿ ಅನುಷ್ಠಾನ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಚುನಾವಣೆ ಮುಗಿದು ವರ್ಷ ಕಳೆದರೂ ಮೊಯ್ಲಿ ಅವರಿಗೆ ತಮ್ಮ ಆಶ್ವಾಸನೆಯ ನೆನಪು ಇಲ್ಲ. ಚುನಾವಣೆ ಗೆಲುವಿಗಾಗಿ ಹೇಳಿಕೆ ನೀಡಿದ್ದನ್ನು ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.
ಗೋರಕ್ ಸಿಂಗ್ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಚಿಕ್ಕಮಗಳೂರು ಭಾಗದ ಅಡಕೆ ಬೆಳೆಗಾರರ ನಿಯೋಗದೊಂದಿಗೆ ಮೊಯ್ಲಿ ಅವರನ್ನು ಭೇಟಿ ಮಾಡಿ ಭರವಸೆಯನ್ನು ನೆನಪಿಸಿಕೊಡಲಾಗುವುದು ಎಂದು ತಿಳಿಸಿದರು.
ಪಕ್ಷವು ಹಿಂದಿನಿಂದಲೂ ಅಡಕೆ ಬೆಳೆಗಾರರ ಪರವಾಗಿ ಒಂದಿಲ್ಲೊಂದು ಹೋರಾಟ ಮಾಡಿಕೊಂಡು ಬರುತ್ತಿದ್ದು, ಕೊಳೆರೋಗಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತನ್ನ ಹೋರಾಟ ಮುಂದುವರೆಸಲಿದೆ ಎಂದರು.
ಪಕ್ಷದ ಉತ್ತರ ಕನ್ನಡ ಜಿಲ್ಲೆಯ ಮುಖಂಡರಾದ ರಾಜೇಶ್ವರಿ ಹೆಗಡೆ ಹಾಜರಿದ್ದರು.