ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಂಗಸಮಾಜದಲ್ಲಿ ಶಿವಮೊಗ್ಗಕ್ಕೆ ಪ್ರಾತಿನಿಧ್ಯವಿಲ್ಲ

Lingaraj Badiger
Updated On : 24 Aug 2013, 10:52 am

ಕ.ಪ್ರ.ವಾರ್ತೆ, ಶಿವಮೊಗ್ಗ, ಆ. 23
ರಾಜ್ಯದ ಎಲ್ಲಾ ರಂಗಾಯಣಗಳ ನಿರ್ವಹಣೆ ಮಾಡಬೇಕಾದ ರಂಗಸಮಾಜ ಅಂತೂಇಂತೂ ರಚನೆಯಾಗಿದೆ. ಆದರೆ ರಾಜ್ಯದ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾದ ಶಿವಮೊಗ್ಗದಲ್ಲಿರುವ ರಂಗಾಯಣಕ್ಕೆ ಪ್ರಾತಿನಿದ್ಯವೇ ಸಿಕ್ಕಿಲ್ಲ.
ಹಾಲಿ ಏಳು ಸದಸ್ಯರನ್ನು ರಂಗಾಯಣಕ್ಕೆ ನೇಮಕ ಮಾಡಲಾಗಿದೆ. ಪ್ರೊ. ಜಿ.ಕೆ. ಗೋವಿಂದರಾವ್ ಸೇರಿದಂತೆ ನೇಮಕವಾಗಿರುವ ಎಲ್ಲರೂ ಸಹ ಅರ್ಹರೇ ಆಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದವರಾಗಿದ್ದಾರೆ. ಆದರೆ, ಶಿವಮೊಗ್ಗ ರಂಗಾಯಣ ವ್ಯಾಪ್ತಿಯಲ್ಲಿ ಬರುವ 9 ಜಿಲ್ಲೆಗಳ ಒಬ್ಬ ಕಲಾವಿದರ- ರಂಗತಜ್ಞರಿಗೂ ಈ ರಂಗಸಮಾಜದಲ್ಲಿ ಅವಕಾಶ ಸಿಕ್ಕಿಲ್ಲ.
ರಂಗ ಸಮಾಜದ ಸದಸ್ಯರ ಪಟ್ಟಿಯನ್ನು ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶುಕ್ರವಾರ ಮೈಸೂರು, ಶಿವಮೊಗ್ಗ ಹಾಗೂ ಧಾರವಾಡ ರಂಗಾಯಣಗಳಿಗೆ ಕಳುಹಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರಿ ಅವರು ಅಧ್ಯಕ್ಷರಾಗಿದ್ದು, ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೇ ರಂಗಸಮಾಜದ ಕಾರ್ಯದರ್ಶಿಯಾಗಿರುತ್ತಾರೆ.
ಸದಸ್ಯರಾಗಿ ರಂಗನಟ, ನಿರ್ದೇಶಕ ಪ್ರೊ. ಜಿ.ಕೆ. ಗೋವಿಂದರಾವ್ (ಬೆಂಗಳೂರು), ರಂಗನಟಿ ಸುಜಾತ ಜಂಗಮಶೆಟ್ಟಿ (ಗುಲ್ಬರ್ಗ), ಕಲಾನಿರ್ದೇಶಕ ಶಶಿಧರ ಅಡಪ (ಮಂಗಳೂರು), ನಾಟಕಕಾರ ಡಿ.ಎಸ್. ಚೌಗಲೆ (ಬೆಳಗಾವಿ), ಚಿತ್ರ ಕಲಾವಿದ ಸೊಲಬಕ್ಕನವರ್ (ಧಾರವಾಡ), ನಟ, ನಿರ್ದೇಶಕ ಮಂಡ್ಯ ರಮೇಶ್(ಮಂಡ್ಯ), ನಾಟಕಕಾರ ಕೆ.ವೈ. ನಾರಾಯಣಸ್ವಾಮಿ (ಕೋಲಾರ) ಅವರು ನೇಮಕವಾಗಿದ್ದಾರೆ. ಹೊರರಾಜ್ಯದ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು. ರಂಗಾಯಣದ ರೂಪುರೇಶೆಗಳ ಬಗ್ಗೆ ವರದಿ ನೀಡಿರುವ ರಂಗಕರ್ಮಿ ಪ್ರಸನ್ನ ಹಾಗೂ ಗುರುರಾವ್ ಬಾಪಟ್ ಅವರ ಸಮಿತಿಯು ಆಯಾ ರಂಗಾಯಣಗಳ ನಿರ್ವಹಣೆಗೆ ಸ್ಥಳೀಯ ಸಮಿತಿಯೊಂದನ್ನು ರಚಿಸಬೇಕು ಎಂದಿದ್ದಾರೆ. ಆದರೆ, ಈ ಸಮಿತಿಗೆ ರಂಗಸಮಾಜಕ್ಕಿರುವ ಅಧಿಕಾರಗಳು ಇರುವುದಿಲ್ಲ.
ಅವಕಾಶವಿಲ್ಲ: ಮೂರು ವರ್ಷಗಳ ಹಿಂದೆ ಆರಂಭವಾಗಿರುವ ಶಿವಮೊಗ್ಗ ರಂಗಾಯಣವು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಹಾಸನ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಹಾಲಿ ರಂಗಸಮಾಜಕ್ಕೆ ನೇಮಕವಾಗಿರುವವರಲ್ಲಿ ಶಶಿಧರ ಅಡಪ ಅವರನ್ನು ಮಂಗಳೂರು ಮೂಲದವರೆಂದು ತೋರಿಸಲಾಗಿದೆ. ವಾಸ್ತವವಾಗಿ ಇವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.
ಈಗ ನೇಮಕವಾಗಿರುವ ಸದಸ್ಯರ ಅರ್ಹತೆಯ ಬಗ್ಗೆ ಯಾರಿಗೂ ಆಕ್ಷೇಪವಿಲ್ಲ. ಈಗಾಗಲೇ ರಂಗಾಯಣ ಇರುವ ಧಾರವಾಡ ಹಾಗೂ ಮುಂದೆ ಸ್ಥಾಪನೆಯಾಗಲಿರುವ ಗುಲ್ಬರ್ಗದವರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಈಗಿನ್ನೂ ಬೆಳೆಯುತ್ತಿರುವ ಶಿವಮೊಗ್ಗ ರಂಗಾಯಣವನ್ನು ರೂಪಿಸುವ ಸಂದರ್ಭದಲ್ಲಿ ಇಲ್ಲಿಯವರೇ ಆದ ಒಬ್ಬರೂ ರಂಗಸಮಾಜದಲ್ಲಿ ಇಲ್ಲದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ರಂಗಾಯಣ ಕೇಂದ್ರವಿರುವ ಮೈಸೂರು ಹಾಗೂ ಧಾರವಾಡದ ಹಿರಿಯರಿಗೆ ಸಮಿತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ, ಶಿವಮೊಗ್ಗದವರಿಗೆ ಏಕೆ ಕೈಬಿಡಲಾಗಿದೆ ಎಂಬ ಪ್ರಶ್ನೆ ಮೇಲೆದ್ದಿದೆ.
ಪ್ರತಿನಿಧಿ ಇಲ್ಲ: ಈ ಬಗ್ಗೆ ಪ್ರತಿಕ್ರಿಯಿಸಿರುವ ಕಲಾವಿದರು ಹವ್ಯಾಸಿ ರಂಗತಂಡಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಎಸ್.ಸಿ. ಗೌರಿಶಂಕರ್, ಕರ್ನಾಟಕದಲ್ಲಿ ಶಿವಮೊಗ್ಗ ರಂಗಕಲೆ ಮತ್ತು ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿದ್ದರೂ ಕೂಡ ರಂಗಸಮಾಜದಂತಹ ಪ್ರಭಾವಿ ಸಮಿತಿಗೆ ಶಿವಮೊಗ್ಗದಿಂದ ಯಾವುದೇ ಪ್ರತಿನಿಧಿ ಇಲ್ಲದಿರುವುದು ಆಶ್ಚರ್ಯ ತಂದಿದೆ ಎಂದಿದ್ದಾರೆ. ಮುಂದಾದರೂ ಶಿವಮೊಗ್ಗಕ್ಕೆ ಪ್ರಾತಿನಿದ್ಯ ಕೊಡುವುದು ಇಲ್ಲಿನ ಕಲಾಸಕ್ತರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದಿದ್ದಾರೆ.
ಸೆಪ್ಟೆಂಬರ್ 3ರಂದು ರಂಗಸಮಾಜದ ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿಯಾದರೂ ಈ ಬಗ್ಗೆ ಚರ್ಚೆ ನಡೆಯುವುದೇ ಎಂದು ಕಾದು ನೋಡಬೇಕು.
-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement