ಅನಧಿಕೃತ ಅಂಗಡಿ ತೆರವು
ಸೊರಬ: ತಾಲೂಕು ಹೋಬಳಿ ಕೇಂದ್ರ ಆನವಟ್ಟಿ ಗ್ರಾಪಂಗೆ ಸೇರಿದ್ದ ಇಲ್ಲಿನ ಬಸ್ ನಿಲ್ದಾಣದ ಬಳಿಯ ಅನಧಿಕೃತ ಅಂಗಡಿಯೊಂದನ್ನು ಶನಿವಾರ ತೆರವುಗೊಳಿಸಲಾಯಿತು.
ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸನಂ 315ರಲ್ಲಿ ಗೋವಿಂದಪ್ಪ ಎನ್ನುವವರು ಸುಮಾರು 10-15 ವರ್ಷಗಳ ಹಿಂದೆ ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಈ ಅತಿಕ್ರಮಣದ ಕುರಿತಂತೆ ಗ್ರಾಪಂ ಹಲವುಬಾರಿ ಸೂಚನೆ ನೀಡಿತ್ತಾದರೂ ತೆರವುಗೊಳಿಸಿರಲಿಲ್ಲ, ನಂತರ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ನ್ಯಾಯಾಲಯದ ತೀರ್ಪು 2006ರಲ್ಲಿಯೇ ಹೊರಬಂದಿದ್ದು, ತೆರವುಗೊಳಿಸುವಂತೆ ಸೂಚಿಸಿತ್ತು. ಆದರೂ ತೆರವುಗೊಳಿಸಿರಲಿಲ್ಲ. ಇದೇ ಮೇ 25ರಂದು ಗ್ರಾಪಂ ಕರೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಈ ಜಾಗ ರವೀಂದ್ರ ಎಂಬುವವರಿಗೆ ಬಿಡ್ ಆಗಿತ್ತು. ಅವರು ಜಾಗ ತೆರವುಗೊಳಿಸಿದರೆ ಮಾತ್ರ ಬಿಡ್ ಹಣ ಪಾವತಿಸುವುದಾಗಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಕರಾರು ಪತ್ರ ಸಲ್ಲಿಸದೆ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಗ್ರಾಪಂ ಸೂಚಿಸಿದ ಮೇರೆಗೆ ಕರಾರು ಕೂಡ ಬರೆದುಕೊಟ್ಟಿದ್ದರು.
ಈ ಪ್ರಕ್ರಿಯೆ ಬಳಿಕ ತೆರವು ಆಗದ ಜಾಗದ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಪಂ ಮು.ಕಾ.ನಿ ಅಧಿಕಾರಿಗಳ ಆದೇಶದನ್ವಯ ಗ್ರಾಪಂ ಜಾಗ ತೆರವುಗೊಳಿಸಲು ಮುಂದಾಗಿದ್ದು, ಪಿಡಿಒ, ಗ್ರಾಪಂ ಅಧ್ಯಕ್ಷ, ಸದಸ್ಯರುಗಳು, ಗ್ರಾಮಸ್ಥರು ಹಾಗೂ ಪೊಲೀಸ್ ಅಧಿಕಾರಿಗಳು ಶೆಡ್ ತೆರವುಗೊಳಿಸಿದರು.