ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೊಳೆ ರೋಗ: ರೈತರ ನೆರವಿಗೆ ಬರುವಂತೆ ಸಿಎಂಗೆ ಮನವಿ

Mainashree
Updated On : 25 Aug 2013, 11:29 am

ಕ.ಪ್ರ.ವಾರ್ತೆ  ಸಾಗರ   ಆ.24
ಕೊಳೆ ರೋಗ ಬಾಧೆಯಿಂದ ಮಲೆನಾಡು ಭಾಗದ ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಮನವಿ ಮಾಡಿದರು.
ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ ಸಂಘದ ಪರವಾಗಿ ಮನವಿ ಸಲ್ಲಿಸಿ, ಮಲೆನಾಡು ಭಾಗದಲ್ಲಿ ಶೇ.95ರಷ್ಟು ಸಣ್ಣ ಹಾಗೂ ಅತಿಸಣ್ಣ ಹಿಡುವಳಿದಾರರಿದ್ದಾರೆ. ಅವರಿಗೆ ಅಡಕೆ ಬೆಳೆ ಹೊರತುಪಡಿಸಿ ಜೀವನೋಪಾಯಕ್ಕೆ ಬೇರೆ ಮಾರ್ಗ ಇಲ್ಲ. ಈ ಸಾಲಿನಲ್ಲಿ ಸಾಲಸೋಲ ಮಾಡಿ ಬೆಳೆಸಿದ ಅಡಕೆ ಫಸಲು ಕೊಳೆರೋಗದಿಂದ ಪೂರ್ಣ ನಾಶವಾಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಶೇ.80 ಬೆಳೆ ನಾಶ: ಈ ಸಾಲಿನ ಮುಂಗಾರು ಮಳೆಯಿಂದಾಗಿ ಮಲೆನಾಡು ಭಾಗದ ಬಹುತೇಕ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು ಶೇ.75ರಿಂದ ಶೇ. 80ರಷ್ಟು ಬೆಳೆ ನಾಶವಾಗಿದೆ. ಈಗಾಗಲೇ ಎರಡು ಬಾರಿ ಕೊಳೆ ಔಷಧಿ ಸಿಂಪಡಿಸಿದರೂ ಬೆಳೆಯನ್ನು ಉಳಿಸಿಕೊಳ್ಳಲು ಆಗಿಲ್ಲ. ಮಳೆ ಮುಂದುವರೆದಿರುವುದರಿಂದ ಮತ್ತೊಮ್ಮೆ ಕೊಳೆ ಔಷಧಿ ಸಿಂಪಡಣೆ ಮಾಡದಿದ್ದರೆ ಅಡಕೆ ಮರಗಳು ಸಹ ನಾಶವಾಗುವ ಹಂತ ತಲುಪಿದೆ ಎಂದು ಜಯಂತ್ ತಮ್ಮ ಅಹವಾಲು ಮಂಡಿಸಿದರು.
ಸಂಕಷ್ಟಕ್ಕೆ ಒಳಗಾಗಿರುವ ಬೆಳೆಗಾರರಿಗೆ ಸರ್ಕಾರ ನಿಗದಿಪಡಿಸಿದ ಬೆಂಬಲಬೆಲೆ ಆಧಾರದ ಮೇಲೆ ಪರಿಹಾರ ನೀಡಬೇಕು ಅಥವಾ ವಿಧಾನಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಅವರು ತಮಗೆ ಪತ್ರ ಬರೆದಂತೆ ಎಕರೆಗೆ ಕನಿಷ್ಠ 25 ಸಾವಿರ ಪರಿಹಾರ ನೀಡಬೇಕು. ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಮತ್ತೊಮ್ಮೆ ತೋಟಕ್ಕೆ ಔಷಧಿ ಸಿಂಪಡಣೆಗೆ ಅನುಕೂಲವಾಗುವ ರೀತಿಯಲ್ಲಿ ಮೈಲುತುತ್ತಕ್ಕೆ ಎಕರೆಗೆ 2 ಸಾವಿರ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.
ಪರಿಶೀಲನೆ ಭರವಸೆ: ಬೆಳೆಗಾರರ ಅಹವಾಲು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ. ಕೊಳೆರೋಗದಿಂದ ಹಾನಿಗೊಳಗಾದ ಅಡಕೆ ಬೆಳೆಗೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ನಿಗಾವಹಿಸಲಾಗುವುದು ಎಂದು ಭರವಸೆ ನೀಡಿದರು.
ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ, ವಿಪ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಪ್ರಮುಖರಾದ ರಮೇಶ್ ಹೆಗಡೆ, ತೀ.ನ. ಶ್ರೀನಿವಾಸ್, ಕೆ. ಹೊಳೆಯಪ್ಪ, ವ.ಶಂ. ರಾಮಚಂದ್ರ ಭಟ್, ಆರ್.ಎಸ್. ಗಿರಿ, ಕೆ.ಸಿ. ದೇವಪ್ಪ, ಎಂ.ಸಿ. ರತ್ನಾಕರ ಗೌಡ, ವೆಂಕಟಗಿರಿ ಕುಗ್ವೆ, ಅರುಣ ಕುಮಾರ್ ಗಡಿಕಟ್ಟೆ, ಮಹಾದೇವಪ್ಪ ಶಿಕಾರಿಪುರ, ತಿಮ್ಮಪ್ಪ, ಅಗಡಿ ಅಶೋಕ್, ಶಶಿಧರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement