ಪರಿಸರ ಮಾಲಿನ್ಯಕ್ಕೆ ಆಧುನಿಕತೆಯೇ ಕಾರಣ
ಕ.ಪ್ರ.ವಾರ್ತೆ ಶಿವಮೊಗ್ಗ ಆ.24
ಪರಿಸರ ಮಾಲಿನ್ಯ ಹೆಚ್ಟಾಗಲು ಅಧುನಿಕತೆಯೇ ಕಾರಣ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿಶ್ವ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಎಚ್ಚರಿಸಿದರು.
ನಗರದ ಜವಾಹರಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಚಿರಂತನ ಕ್ಲಬ್, ಜವಾಹರಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆರೆ ಕಣ್ಣರೆ: ಕೆಲವರ್ಷಗಳ ಹಿಂದೆ ನಮ್ಮ ಸುತ್ತ-ಮುತ್ತ ನೂರಾರು ಕೆರೆ,ಕಟ್ಟೆಗಳನ್ನು ನೋಡುತ್ತಿದ್ದೆವು. ಆದರೆ, ಇಂದು ಅವೆಲ್ಲ ಕಣ್ಮರೆಯಾಗಿವೆ. ಆ ಜಾಗದಲ್ಲಿ ಇಂದು ಬೃಹತ್ ಮನೆ, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು ತಲೆ ಎತ್ತಿವೆ ಎಂದು ವಸ್ತು ಸ್ಥಿತಿಯ ಅವಲೋಕನ ನಡೆಸಿದರು.
ಮನುಷ್ಯ ಪ್ರಕೃತಿಯ ಮೇಲೆ ದಿನಂಪ್ರತಿ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ ನಡೆಸುತ್ತಿದ್ದಾನೆ. ಹಾಗಾಗಿ ಇಂದಿನಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಅದರ ಉಳಿವಿಗೆ ಶ್ರಮಿಸಬೇಕು. ಇಲ್ಲವಾದಲ್ಲಿ ಪ್ರಕೃತಿಯ ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಉತ್ತಮ, ಗಾಳಿ, ಬೆಳಕು ಸಿಗದೆ ಅನಾರೋಗ್ಯದಿಂದ ಬಳಲಬೇಕಾಗುತ್ತದೆ. ಇಂದರಿಂದ ಮನುಕುಲವೇ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಪರಿಸರ ಕಾಳಜಿ ಅಗತ್ಯ: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಕಾರಿ ಸಸಿಕಾಂತ್ ಸೆಂಥಿಲ್, ಪರಿಸರವನ್ನು ಉಳಿಸಬೇಕು ಎಂದು ಕೇವಲ ಭಾಷಣಗಳಲ್ಲಿ ಹೇಳಿದರೆ ಸಾಲದು. ನಿಜವಾಗಿಯೂ ಪರಿಸರದ ಬಗ್ಗೆ ಕಾಳಜಿ ಇದ್ದರೆ ಅದನ್ನು ಕಾರ್ಯರೂಪಕ್ಕೆ ತರಬೇಕು. ಪರಿಸರದ ಸಂಪನ್ಮೂಲವನ್ನು ನಾವು ನಮ್ಮ ಮುಂದಿನ ಪೀಳಿಗೆಗೂ ಉಳಿಸಬೇಕು ಎಂದರು.
ಪ್ರಸ್ತುತ ಪರಿಸರ ಮಾಲಿನ್ಯ ಒಂದು ಗಂಭೀರ ಸಮಸ್ಯೆ. ಇದರ ಗಂಭೀರತೆಯನ್ನು ನಾವು ಅರಿತುಕೊಂಡಲ್ಲಿ ಮಾತ್ರ ಇದಕ್ಕೆ ಸೂಕ್ತ ಪರಿಹಾರ ದೊರಕುತ್ತದೆ ಎಂದು ತಿಳಿಸಿದರು.
ವಿವಿಧ ಸ್ಪರ್ಧೆ: ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಕಿರು ಪ್ರಹಸನ ಸ್ಪರ್ಧೆ, ವರ್ಣ ಚಿತ್ರ ಸ್ಪರ್ಧೆ, ಚರ್ಚಾ ಸ್ಪರ್ಧೆ, ವಸ್ತು ಪ್ರದರ್ಶನ, ನಿಧಾನ ಸೈಕಲ್ ಸ್ಪರ್ಧೆ, ಕವನ ರಚನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಮಾದರಿಯ ಜೈವಿಕ ಇಂಧನ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಸುಮಾರು 60 ಶಾಲೆಗಳ 600ಕ್ಕೂ ಹೆಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಜೆಎನ್ಎನ್ಸಿಇ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಶ್ರೀನಿವಾಸರಾವ್ ಕುಂಟೆ, ಚಿರಂತನ ಕ್ಲಬ್ನ ಸಂಚಾಲಕ ಡಾ. ಎಲ್. ಶ್ರೀಪತಿ ಮತ್ತಿತರರು ಇದ್ದರು.