ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೆಳೆ ಹಾನಿ: ಚಿಕ್ಕ ಹಿಡುವಳಿದಾರರಿಗೆ ಪರಿಹಾರ

Mainashree
Updated On : 25 Aug 2013, 11:22 am

ತೀರ್ಥಹಳ್ಳಿ: ಸೆಪ್ಟಂಬರ್ 15ರೊಳಗೆ 2.19 ಎಕರೆ ಭೂಮಿಯಲ್ಲಿನ ಬೆಳೆಹಾನಿ ಸಂಭವಿಸಿದ ರೈತರಿಗೆ ಪರಿಹಾರ ಒದಗಿಸಲಾಗುವುದು. ನಂತರ ಅದಕ್ಕಿಂತ ಹೆಚ್ಚಿನ ಭೂಮಿ ಹೊಂದಿ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸಲಾಗುವುದು. ಭತ್ತದ ಬೆಳೆ ಹಾನಿಗೆ ಮೊದಲ ಪ್ರಾಶಸ್ತ್ಯದ ಮೇರೆಗೆ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
 ಜಿಲ್ಲೆಯಾದ್ಯಂತ ಈ ಸಾಲಿನಲ್ಲಿ ಸುರಿದಿರುವ ಭಾರಿ ಮಳೆಗೆ ಜಿಲ್ಲೆಯಲ್ಲಿ ಸುಮಾರು 200 ಕೋಟಿ ರು.ಗೂ ಹೆಚ್ಚು ಬೆಳೆ ಹಾನಿ ಸಂಭವಿಸಿದ್ದು, ಇದೇ ಮೊದಲ ಬಾರಿಗೆ ಅಡಕೆ ಬೆಳೆಗಾರರಿಗೂ ಸೇರಿದಂತೆ ಬೆಳೆ ಹಾನಿ ಸಂಭವಿಸಿದ ಎಲ್ಲರಿಗೂ ಪರಿಹಾರ ಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಶುಕ್ರವಾರ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಭಾಗದಲ್ಲಿ ಸಂಭವಿಸಿರುವ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರು. 200 ಕೋಟಿ ನಷ್ಟ: ಈ ಹಿಂದೆ ಜಿಲ್ಲೆಯ ವಿವಿಧ ಹಂತದ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿಯಂತೆ 38 ಕೋಟಿ ರು. ನಷ್ಟ ಸಂಭವಿಸಿರುವ ವರದಿ ನೀಡಲಾಗಿತ್ತು. ಆದರೆ ಮಳೆ ಪ್ರಮಾಣ ತೀವ್ರವಾಗಿದ್ದು, ಬಹುತೇಕ ಬೆಳೆಗಳು ಮಳೆಯಿಂದ ಹಾನಿಯಾಗಿರಬಹುದಾದ ಬಗ್ಗೆ ವರದಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ 200 ಕೋಟಿ ರು.ಗೂ ಹೆಚ್ಚು ಬೆಳೆಹಾನಿ ಸಂಭವಿಸಿರುವ ಬಗ್ಗೆ ಅಂದಾಜು ಮಾಡಲಾಗಿದೆ ಎಂದರು.
 ಅತಿವೃಷ್ಟಿ ಹಿನ್ನೆಲೆಯಲ್ಲಿ ಬಹುತೇಕ ಅಡಿಕೆ ತೋಟಗಳು ಶೀತ ವಾತಾವರಣದಿಂದ ಸಂಪೂರ್ಣವಾಗಿ ನಾಶವಾಗುವ ಸಂಭವ ಇರುವುದರಿಂದ ಇಂತಹ ಸಂತ್ರಸ್ತ ಬೆಳೆಗಾರರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧ್ಯಯನ ತಂಡವನ್ನು ರಚಿಸಿ, ವರದಿ ಪಡೆಯಲಾಗುವುದು ಎಂದು ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಅತಿವೃಷ್ಟಿ: ಸಾಂಪ್ರದಾಯಕ ಅಡಕೆ ಕೃಷಿಯಲ್ಲಿ ತೊಡಗಿರುವ ರೈತರು ಬೇರೆ ಬೇರೆ ಕಾರಣಗಳಿಂದಾಗಿ ನಷ್ಟ ಅನುಭವಿಸಿರುವ ಸಂದರ್ಭ ಬಂದೊದಗಿದೆ. ಈ ಹಿಂದೆ ಕೋತಿಗಳ ಕಾಟದಿಂದಾಗಿ ಅಡಿಕೆ ಬೆಳೆ ಹಾನಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಜೊತೆಯಲ್ಲಿ ಇದೀಗ ಅತಿವೃಷ್ಟಿಯ ಹೊಡೆತದಿಂದ ಅಡಕೆ ತೋಟಗಳು ಸಂಪೂರ್ಣ ಬಿದ್ದುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
 ಈ ಹಿನ್ನೆಲೆಯಲ್ಲಿ ಅಡಕೆ ತೋಟಗಳನ್ನು ಪುನಸ್ಚೇತನಗೊಳಿಸಬಹುದೇ ಅಥವಾ ಅಡಕೆ ಬೆಳೆಯನ್ನೇ ತೆಗೆಯಬೇಕೆ ಎಂಬುವ ಮಣ್ಣಿನ ಗುಣಲಕ್ಷಣದ ಅಧ್ಯಯನ ನಡೆಸಲು ತಜ್ಞರ ತಂಡವನ್ನು ಕರೆಸಲಾಗುವುದು. ತಂಡದ ವರದಿ ಆಧರಿಸಿ, ಸಂಪೂರ್ಣ ನಾಶವಾಗುವ ಅಡಿಕೆ ಬೆಳೆಗಾರರಿಗೆ ಪರಿಹಾರ ಒದಗಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.  ಸಚಿವರೊಂದಿಗೆ ಸುಂದರೇಶ್, ಪದ್ಮನಾಭ ಇದ್ದರು.
ಶಿಕ್ಷಕರ ಸೇವೆ ವಿಸ್ತರಣೆ
ತೀರ್ಥಹಳ್ಳಿ: ಶೈಕ್ಷಣಿಕ ವರ್ಷದ ಅವಧಿಯ ಮಧ್ಯದಲ್ಲಿ ನಿವೃತ್ತಿ ಹೊಂದುವ ಶಿಕ್ಷಕರ ಸೇವೆಯನ್ನು ಮಾರ್ಚ್ 31ರವರೆಗೂ ವಿಸ್ತರಿಸಲಾಗುವುದು. ಈ ಕುರಿತ ಸರ್ಕಾರಿ ಆದೇಶ ಇನ್ನೊಂದು ವಾರದಲ್ಲಿ ಹೊರಬೀಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಶುಕ್ರವಾರ ತೀರ್ಥಹಳ್ಳಿ ಭಾಗದ ವಿವಿಧ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸೆಪ್ಟೆಂಬರ್ 1ರಿಂದ ಮಾರ್ಚ್ 31ರೊಳಗೆ ರಾಜ್ಯದಲ್ಲಿ ಸುಮಾರು 2,900 ಶಿಕ್ಷಕರು ನಿವೃತ್ತಿಯಾಗಲಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯೆ ನಿವೃತ್ತಿಯಾಗುವುದರಿಂದ ಪಾಠ ಪ್ರವಚನಗಳಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಇಂತಹ ಶಿಕ್ಷಕರನ್ನು ಮಾರ್ಚ್ 31ರವರೆಗೂ ಮುಂದುವರೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಸಂಬಂಧ ಹಣಕಾಸು ಇಲಾಖೆ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಚಿವರು ತಿಳಿಸಿದರು.
ತಾತ್ಕಾಲಿಕ ನೇಮಕಾತಿ: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಬಿಇಓ ಮೂಲಕ ತಾತ್ಕಾಲಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸೂಚನೆ ನೀಡಲಾಗಿದ್ದು, ಇನ್ನೆರಡು ದಿನದಲ್ಲಿ ಆದೇಶ ಹೊರಡಿಸಲಾಗುವುದು ಎಂದರು.
ತಾತ್ಕಾಲಿಕ ನೇಮಕಾತಿಯಲ್ಲಿ ಆಯ್ಕೆಯಾದ ಶಿಕ್ಷಕರು ನಿಯಮಾನುಸಾರ ನೇಮಕಾತಿ ಅರ್ಹತೆಗಳನ್ನು ಹೊಂದಿದಲ್ಲಿ ಅಂತಹ ಶಿಕ್ಷಕರನ್ನು ಮುಂದುವರಿಸುವ ಹಾಗೂ ಖಾಯಂ ಮಾಡುವ ಬಗ್ಗೆಯೂ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಖಾಸಗಿ ಶಾಲಾ ಮಕ್ಕಳಿಗೂ ಕ್ಷೀರಭಾಗ್ಯ: ರಾಜ್ಯದಲ್ಲಿನ ವಿವಿಧ ಸಂಘ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳ ಮಕ್ಕಳಿಗೂ ಕ್ಷೀರಭಾಗ್ಯ ಯೋಜನೆಯಲ್ಲಿ ಹಾಲು ವಿತರಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.
ಪ್ರಸ್ತುತ ಹಾಲಿನ ಪುಡಿ ವಿತರಣೆ ಜವಾಬ್ದಾರಿಯನ್ನು ಕರ್ನಾಟಕ ಹಾಲು ಒಕ್ಕೂಟ ವಹಿಸುತ್ತಿತ್ತು. ಆದರೆ ರಾಜ್ಯದಲ್ಲಿ 51,000  ಶಾಲಾ ಕಟ್ಟಡಗಳ ಮಾಹಿತಿ ಸಮರ್ಪಕವಾಗಿ ಅವರಿಗೆ ಲಭ್ಯವಾಗದ ಕಾರಣ ಪ್ರಸ್ತುತ ಜಾರಿ ಇರುವ ಮಧ್ಯಾಹ್ನದ ಬಿಸಿ ಊಟದ ಸರಬರಾಜಿನ ಜೊತೆಯಲ್ಲಿಯೇ ಹಾಲಿನಪುಡಿಯನ್ನು ಸರಬರಾಜು ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement