ಹೊಸ ಮದ್ಯದಂಗಡಿಗೆ ಗ್ರಾಮಸ್ಥರ ವಿರೋಧ
ಕ.ಪ್ರ.ವಾರ್ತೆ ಶಿವಮೊಗ್ಗ ಆ.24
ಸಾಗರ ತಾಲೂಕಿನ ಆನಂದಪುರಂನಲ್ಲಿ ಹೊಸ ಮದ್ಯದಂಗಡಿ ಪ್ರಾರಂಭಿಸುತ್ತಿರುವುದನ್ನು ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಮನವಿ ಸಲ್ಲಿಸಿದರು.
ಆನಂದಪುರ ಗ್ರಾಮಸ್ಥರು ಬಡತನದ ರೇಖೆಗಿಂತ ಕೆಳಮಟ್ಟದಲ್ಲಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಪಟ್ಟಣದಲ್ಲಿ ಎರಡು ಮದ್ಯದ ಅಂಗಡಿಗಳಿವೆ. ಇದರಿಂದ ಹಲವು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಈ ಪ್ರದೇಶದಲ್ಲಿ ಮತ್ತೊಂದು ನೂತನ ಮದ್ಯದಂಗಡಿ ಆರಂಭವಾದರೆ ಜನರ ಜೀವನ ಮತ್ತಷ್ಟು ಹದಗೆಡಲು ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಮನವಿಯಲ್ಲಿ ಆರೋಪಿಸಿದರು.
ಇಲ್ಲಿನ ಕೇಂದ್ರ ಬಿಂದುವಾದ ಬಸವನಬೀದಿ ಹಾಗೂ ಅಡೂರಿಗೆ ಹೋಗುವ ರಸ್ತೆಯ ಪಕ್ಕದಲ್ಲೇ ವಾರದ ಸಂತೆ ನಡೆಯುತ್ತದೆ. ಇದರ ಪಕ್ಕದಲ್ಲೇ ಹಾಲಿನ ಶೀತಲೀಕರಣ ಕೇಂದ್ರವಿದೆ. ಇಲ್ಲಿ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘಗಳ ಕಾರ್ಯಕ್ರಮ ನಡೆಯುತ್ತಿರುತ್ತವೆ. ಇಂತಹ ಜನಸಾಂದ್ರತೆ ಇರುವ ಪ್ರದೇಶದಲ್ಲಿ ನೂತನ ಮದ್ಯದಂಗಡಿ ಪ್ರಾರಂಭಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮೋಹನ್, ಸದಸ್ಯ ಬಾಡಮ್ಮ, ಮಾಜಿ ಸದಸ್ಯೆ ಯಶೋದಮ್ಮ, ಜ್ಯೋತಿ, ಪಾರ್ವತಿ, ಆರ್. ಜಗನ್ನಾಥ್, ರಘು, ಎಸ್. ನಾರಾಯಣ, ನಾಗರಾಜ, ಮಂಜುನಾಥ್ ಆಬಾರ, ಮತ್ತಿತರರು ಇದ್ದರು.