ಮನೆಗೆ ನುಗ್ಗಿ ಒಂಟಿ ಮಹಿಳೆ ಮೇಲೆ ಹಲ್ಲೆ
ಕ.ಪ್ರ.ವಾರ್ತೆ ಹೊಸನಗರ ಆ.25
ಒಬ್ಬಂಟಿ ಮಹಿಳೆ ಇರುವುದನ್ನು ಕಂಡು ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿ ಪರಾರಿಯಾದ ಘಟನೆ ತಾಲೂಕಿನ ನಗರ-ಚಿಕ್ಕಪೇಟೆ ಬಳಿ ವರದಿಯಾಗಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಶನಿವಾರ ರಾತ್ರಿ ರತ್ನಮ್ಮ ಎಂಬವರು ಒಬ್ಬರೆ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ರತ್ನಮ್ಮನ ಮೇಲೆ ಹರಿಹಾಯ್ದಿದ್ದಾರೆ.
ಮನೆಯಲ್ಲಿರುವ ಕಡತಗಳನ್ನು ಹುಡುಕಿದ್ದಲ್ಲದೆ, ರತ್ನಮ್ಮಳನ್ನು ಅವಾಚ್ಯವಾಗಿ ನಿಂದಿಸಿ ಕೊಲೆ ಮಾಡುವುದಾಗಿ ಎಗರಾಡಿ ಪರಾರಿಯಾಗಿದ್ದಾರೆ.
ಈ ನಡುವೆ ಹಲ್ಲೆ ನಡೆದ ಮನೆಯಿಂದಲೆ ರತ್ನಮ್ಮನ ಮಗ ವಿಜೇಂದ್ರನಿಗೆ ಪೋನ್ ಹೋಗಿದ್ದು, ಆ ಕಡೆಯಿಂದ ಯಾವುದೆ ಸ್ವರ ಕೇಳಿಸದ ಹಿನ್ನಲೆಯಲ್ಲಿ ಮಗ ವಿಜೇಂದ್ರ ಆತಂಕದಲ್ಲೆ ಮನೆಗೆ ಧಾವಿಸಿದ್ದಾನೆ.
ಆದಾಗಲೆ ಬಾವಿಹಗ್ಗದಿಂದ ಕಟ್ಟಿಹಾಕಲ್ಪಟ್ಟಿದ್ದ ರತ್ನಮ್ಮ ತೀವ್ರ ಅಸ್ವಸ್ಥರಾಗಿದ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿ ನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ರತ್ನಮ್ಮ ದಿ. ಮಂಜುನಾಥ ಎಂಬವರ ಮೊದಲ ಪತ್ನಿಯಾಗಿದ್ದು, ಆಸ್ತಿ ವ್ಯಾಜ್ಯ ಈಗಾಗಲೆ ಕೋರ್ಟನಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎರಡನೆ ಹೆಂಡತಿ ರಾಧಮ್ಮ ಪ್ರಚೋದನೆಯಲ್ಲಿ ಅವರ ಮಕ್ಕಳಾದ ವೆಂಕಟೇಶ ಮತ್ತು ನಾಗೇಶ ಎಂಬುವವರು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ರತ್ನಮ್ಮ ದೂರಿದ್ದಾರೆ.
ಚುರುಕಿನ ತನಿಖೆ: ಒಂಟಿ ಮಹಿಳೆ ಮೇಲೆ ಕಟ್ಟಿಹಾಕಿ ಹಲ್ಲೆ ನಡೆಸಿದ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡ ಪಿಎಸ್ಐ ಸಂದೀಪ್, ದೂರಿನಲ್ಲಿ ದಾಖಲಿಸಿದ ಶಂಕಿತ ಆರೋಪಿಗಳ ನಿವಾಸವಿರುವ ಹೊಸಂಗಡಿಗೆ ತೆರಳಿ ತನಿಖೆ ನಡೆಸಲಾಗಿದೆ. ಬಳಿಕ ನಾಗೇಶ ಮತ್ತು ವೆಂಕಟೇಶನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಪಿಎಸ್ಐ ತಿಳಿಸಿದರು.
ಕಠಿಣಕ್ರಮಕ್ಕೆ ಆಗ್ರಹ: ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿಹಾಕಿ ಹಲ್ಲೆ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿ ಊರಿನಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ ದುಷ್ಕರ್ಮಿಗಳು ಯಾರೆ ಆಗಿದ್ದರು ಕೂಡಲೆ ಪತ್ತೆ ಹಚ್ಚಬೇಕು.
ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಆರೋಪಿಗಳ ಬಂಧನಕ್ಕೆ ಎಂದು ಸ್ಥಳೀಯ ಗ್ರಾಮಸ್ಥರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ.