ಶಿಕ್ಷಕರು- ಉಪನ್ಯಾಸಕರ ಕ್ಷಾಮಕ್ಕೆ ತತ್ಕಾಲ್
ಶಿವಮೊಗ್ಗ: ರಾಜ್ಯ ಶಿಕ್ಷಕರು, ಉಪನ್ಯಾಸಕರ ಭೀಕರ ಕ್ಷಾಮ ಎದುರಿಸುತ್ತಿದೆ ಎಂಬುದಕ್ಕೆ ಕನ್ನಡಿ ಎಂಬಂತೆ ದೊಡ್ಡಮಟ್ಟದ ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿ ಪ್ರಕಿಯೆ ಈ ವಾರದಲ್ಲಿ ಆರಂಭವಾಗುತ್ತಿದೆ. ಇದೇ ಹೊತ್ತಿನಲ್ಲಿ ಶಿಕ್ಷಕರು, ಉಪನ್ಯಾಸಕರಾಗಬೇಕೆಂಬ ಕನಸು ಹೊತ್ತವರಿಗೂ ಈ ಬೆಳವಣಿಗೆಯಿಂದ ಒಂದು ತತ್ಕಾಲ್ ಅವಕಾಶ ಒದಗಿಬಂದಂತಾಗಿದೆ.
ಕಾಲಕಾಲಕ್ಕೆ ಶಿಕ್ಷಕರು, ಉಪನ್ಯಾಸಕರ ನೇಮಕಾತಿ ನಡೆಯದೇ ಇರುವುದರಿಂದಾಗಿ ರಾಜ್ಯದೆಲ್ಲೆಡೆ ಶಿಕ್ಷಕರ ಕೊರತೆ ಕಾಣಿಸಿಕೊಂಡಿದೆ. ವಿಶೇಷವೆಂದರೆ ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಕರ ಕೊರತೆ ಅಷ್ಟಾಗಿ ಇಲ್ಲ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಕೊರತೆ ಕಂಡುಬಂದಿದೆ.
ಚಿಕ್ಕೋಡಿಯ ಪ್ರಾಥಮಿಕ ಶಾಲೆಗೆ 700, ಗುಲ್ಬರ್ಗ ಪ್ರೌಢಶಾಲೆಗೆ 140, ಪ್ರಾಥಮಿಕ ಶಾಲೆಗೆ 450, ಬೀದರ್ ಪ್ರಾ.ಶಾಲೆಗೆ 450, ಬಳ್ಳಾರಿಯ ಪ್ರೌಢಶಾಲೆಗಳಿಗೆ 104, ಪ್ರಾ.ಶಾಲೆಗೆ 550, ಕೊಪ್ಪಳದಲ್ಲಿ ಪ್ರೌ.ಶಾಲೆಗೆ 117, ಪ್ರಾ.ಶಾಲೆಗೆ 450, ರಾಯಚೂರಿನ ಪ್ರಾಥಮಿಕ ಶಾಲೆಗಳಿಗೆ 550, ಯಾದಗಿರಿ ಜಿಲ್ಲೆಯ ಪ್ರಾಥಮಿಕ ಶಾಲೆಗೆ 750 ಶಿಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ.
ಎಷ್ಟು ನೇಮಕಾತಿ: ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. 9,405 ಪ್ರಾಥಮಿಕ ಶಾಲಾ ಸಹ ಶಿಕ್ಷಕರು, 1,137 ಪ್ರೌಢಶಾಲಾ ಸಹ ಶಿಕ್ಷಕರು, 1130 ಪದವಿಪೂರ್ವ ಕಾಲೇಜಿನ ಉಪನ್ಯಾಸಕರನ್ನು ಗೌರಧನದ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ ಎಲ್ಲಾ ಜಿಲ್ಲೆಗಳಲ್ಲಿ ಸಮನಾಗಿ ಇಲ್ಲದಿರುವುದರಿಂದ ಮತ್ತು ಕೆಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು ಇರುವುದು ಕಂಡುಬಂದಿರುವುದರಿಂದ ಶಿಕ್ಷಕರನ್ನು ಮರು ಹಂಚಿಕೆ ಮಾಡಲು ಶಿಕ್ಷಣ ಇಲಾಖೆ ಅಧೀನಕಾರ್ಯದರ್ಶಿಯವರು ಸೂಚನೆ ನೀಡಿದ್ದಾರೆ.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚುವರಿ ಶಿಕ್ಷಕರು ಇರುವುದು ಕಂಡುಬಂದಿದ್ದು, ಅವಶ್ಯಕತೆ ಇರುವ ಕಡೆ ಮರು ಹಂಚಿಕೆ ಮಾಡಲೂ ಸಹ ಸೂಚಿಸಲಾಗಿದೆ.
ಒಂದು ಷರತ್ತು: ಅತಿಥಿ ಶಿಕ್ಷಕರು, ಉಪನ್ಯಾಸಕರ ಭರ್ತಿ ಮಾಡಿಕೊಳ್ಳುವ ಅವಕಾಶವನ್ನು ಜಿಲ್ಲಾ ಹಂತದ ಅಧಿಕಾರಿಗಳಿಗೆ ನೀಡಲಾಗಿದೆ. ಕಾರ್ಯಭಾರವಿಲ್ಲದೇ ನಿಯಮಬಾಹಿರವಾಗಿ ಆಯ್ಕೆ ಮಾಡಿದ್ದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಆಧಿಕಾರಿ, ಡಿಡಿಪಿಯುಗಳನ್ನೇ ಜವಾಬ್ದಾರನ್ನಾಗಿ ಮಾಡುವ ಎಚ್ಚರಿಕೆ ನೀಡಲಾಗಿದೆ.
2011ರಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮಾಡಲಾಗಿರುವ ನಿಯಮಾವಳಿಗಳನ್ನೇ ಈ ಬಾರಿಯೂ ಮುಂದುವರಿಸಲಾಗುತ್ತಿದೆ.
ಸರ್ಕಾರದ ಆದೇಶದಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ಮೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವವರೆಗೆ ಅಥವಾ ಮಾರ್ಚ್ 2014ರವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಕೆಲವು ಷರತ್ತಿಗೊಳಪಡಿಸಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಗೌರವಧನ ಮಾಹೆಯಾದ 5,500 ರುಪಾಯಿ, ಪ್ರೌಢಶಾಲಾ ಶಿಕ್ಷಕರ ಗೌರವಧನ 6 ಸಾವಿರ ರುಪಾಯಿ ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ಮಾಹೆಯಾನ 7,000 ರುಪಾಯಿ ನೀಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ಆಯಾಯ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ, ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಬೇಕು. ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುತ್ತದೆ.
ಯಾವ ಜಿಲ್ಲೆಯಲ್ಲಿ ಪ್ರೌಢ, ಪ್ರಾಥಮಿಕ ಶಾಲೆಯಲ್ಲಿ ಎಷ್ಟು ಹುದ್ದೆಗಳು..?
ಜಿಲ್ಲೆ ಪ್ರೌ.ಶಾ. ಪ್ರಾ.ಶಾ
1. ಬೆಂ. ಉತ್ತರ 6 100
2. ಬೆಂ. ದಕ್ಷಿಣ 15 150
3. ಬೆಂ ಗ್ರಾ. 08 150
4. ರಾಮನಗರ 24 350
5. ಕೋಲಾರ 53 190
6. ಮಧುಗಿರಿ 43 210
7. ಚಿಕ್ಕಬಳ್ಳಾಪುರ 32 240
8. ತುಮಕೂರು 59 160
9. ಶಿವಮೊಗ್ಗ 37 350
10. ದಾವಣಗೆರೆ 36 130
11. ಚಿತ್ರದುರ್ಗ 26 200
12. ಮೈಸೂರು 67 200
13. ಚಾಮರಾಜನಗರ 17 240
14. ಮಂಡ್ಯ 27 200
15. ಹಾಸನ 40 220
16. ಚಿಕ್ಕಮಗಳೂರು 08 170
17. ಕೊಡಗು 17 120
ಜಿಲ್ಲೆ ಪ್ರೌ.ಶಾ. ಪ್ರಾ.ಶಾ
18. ದ.ಕ. 62 250
19. ಉಡುಪಿ 11 100
20. ಬೆಳಗಾವಿ 13 300
21. ಚಿಕ್ಕೋಡಿ 19 700
22. ಬಾಗಲಕೋಟೆ 12 250
23. ಬಿಜಾಪುರ 08 280
24. ಧಾರವಾಡ 24 135
25. ಗದಗ- 04 150
26. ಹಾವೇರಿ 32 160
27. ಕಾರವಾರ 06 120
28. ಶಿರಸಿ- 13 380
29. ಗುಲ್ಬರ್ಗಾ 140 450
30. ಬೀದರ್ 11 450
31. ಬಳ್ಳಾರಿ 104 550
32. ಕೊಪ್ಪಳ 117 450
33. ರಾಯಚೂರು 40 550
34. ಯಾದಗಿರಿ 06 750
-ಶ್ರೀಕಾಂತ ಭಟ್