ಶಿವಮೊಗ್ಗದಲ್ಲಿ ಗಾಯಿತ್ರಿ ಪ್ರತಿಪತ್ ಆಚರಣೆ
ಶಿವಮೊಗ್ಗ: ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ, ನಗರದ ವಿವಿಧ ಬ್ರಾಹ್ಮಣ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ಗಾಯಿತ್ರಿ ಪ್ರತಿಪತ್ ಆಚರಣೆಗೊಂಡಿತು. ಬೆಳಿಗ್ಗೆ ಕೋಟೆ ರಸ್ತೆ ಗಾಯತ್ರಿ ದೇವಸ್ಥಾನದಿಂದ ಗಾಯತ್ರಿ ಮಾತೆಯ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ವಿವಿಧ ಬ್ರಾಹ್ಮಣ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು. ಶಾಸಕ ಪ್ರಸನ್ನಕುಮಾರ್ ಸೇರಿದಂತೆ ಸಮಾಜದ ಗಣ್ಯರು ಹಾಜರಿದ್ದರು. ಮೆರವಣಿಗೆ ಕೋಟೆ ರಸ್ತೆಯಿಂದ ಎಸ್‌ಬಿಎಂ ಮಾರ್ಗವಾಗಿ ಗಾಂಧಿಬಜಾರ್, ನೆಹರು ರಸ್ತೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಸಂಜೆ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ 90 ಬಾರಿ ರಕ್ತದಾನ ಮಾಡಿದ ರಮ್ಯ ಮೆಡಿಕಲ್‌ನ ಯಜ್ಞನಾರಾಯಣ, ವಿಪ್ರಟ್ರಸ್ಟ್ ಅಧ್ಯಕ್ಷ ಶ್ಯಾಮ್‌ಪ್ರಸಾದ್ ಮತ್ತು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಂತರ ಪ್ರಸನ್ನಕುಮಾರ್ ಮಾತನಾಡಿ, ಇಂತಹ ಸಮಾಜಮುಖಿ ಸಂಘಟನೆಗಳಲ್ಲಿ ಎಲ್ಲರೂ ತೊಡಗಬೇಕು. ಜೊತೆಗೆ ತಾಲೂಕು ಬ್ರಾಹ್ಮಣ ಸಂಘ ಹಾಗೂ ವಿಪ್ರ ಸಂಘದ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಗಾಯಿತ್ರಿ ದೇವಸ್ಥಾನಕ್ಕೆ ಕಟ್ಟಡ ನಿರ್ಮಾಣಕ್ಕೆ ತೊಡಕುಗಳಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರದ ಮುಂದಾಳತ್ವದಲ್ಲಿ ಬಗೆಹರಿಸಲಾಗುವುದುಎಂದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಚ್ಯುತರಾವ್, ಉಪಾಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ಅನಂತ, ಖಜಾಂಚಿ ಛಾಯಾಪತಿ ಇದ್ದರು.