ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೆ.5ರಂದು ರಾಜ್ಯಾದ್ಯಂತ ಹೋರಾಟ: ಡೀವಿ

Lingaraj Badiger
Updated On : 26 Aug 2013, 10:53 am

ಕ.ಪ್ರ.ವಾರ್ತೆ, ಶಿವಮೊಗ್ಗ, ಆ.25
ರಾಜ್ಯ ಸರ್ಕಾರ ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಘೋಷಿಸದಿದ್ದಲ್ಲಿ ಸೆ.5ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಎಚ್ಚರಿಸಿದರು.
ಭಾನುವಾರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅಡಕೆ ವಾಣಿಜ್ಯ ಬೆಳೆಯಾಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ಆದಾಯ ತರುತ್ತಿದೆ. ಅಲ್ಲದೇ ಕೂಲಿ ಕಾರ್ಮಿಕರಿಗೆ ಹೆಚ್ಚು ಆದಾಯ ತರುವಂತ ಬೆಳೆಯಾಗಿದೆ.
ಇಂತಹ ಬೆಳೆ ಸತತ ಮೂರು ತಿಂಗಳಿಂದ ಸುರಿದ ಭಾರಿ ಮಳೆಗೆ ಹಳದಿ, ಕೊಳೆ ರೋಗದಿಂದ ನೆಲಕ್ಕಚ್ಚಿವೆ. ಇದು ಅಡಕೆ ಬೆಳೆಗಾರರ ಮುಂದಿನ ಜೀವನಕ್ಕೆ ಮಾರಕವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಹಮ್ಮಿಕೊಂಡಿಲ್ಲ: ಅಡಕೆ ಬೆಳೆಗಾರರ ಬಗ್ಗೆ ಸರ್ಕಾರ ಈ ವರೆಗೆ ಎಚ್ಚೆತ್ತುಕೊಳ್ಳದಿರುವುದು ದುರ್ದೈವ, ಅಡಕೆ ಬೆಳೆಗಾರರನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆ ರೂಪಿಸಿಲ್ಲ. ತೋಟಗಾರಿಕೆ ಇಲಾಖೆಗಳ ಸಣ್ಣ- ಪುಟ್ಟ ಯೋಜನೆಗಳು ಹೊರತುಪಡಿಸಿದರೆ ಸರ್ಕಾರ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇರೆ ಯೋಜನೆಗಳಿಗೆ ಸರ್ಕಾರ ಹಣದ ಹೊಳೆಯನ್ನೇ ಹರಿಸುತ್ತಿದೆ. ಆದರೆ, ಅಡಕೆ ಬೆಳೆಗಾರರಿಗೆ ಯಾವುದೇ ಪರಿಹಾರ ನೀಡಿಲ್ಲ. ಇದೀಗ ಅಡಕೆ ಬೆಳೆಗಾರನಿಗೆ ಆತ್ಮಹತ್ಯೆಯೊಂದೇ ದಾರಿಯಾಗಿದ್ದು, ಅಲ್ಪಸ್ವಲ್ಪದ ಪರಿಹಾರ ಹಣ ಪಡೆಯಲು ಫೋಟೋ ನೀಡಬೇಕು. ಸೂಕ್ತ ಮಾಹಿತಿ ಕೊಡಬೇಕು ಎಂಬ ನಿಬಂಧನೆಗಳನ್ನು ಹಾಕಿ ರೈತರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ ಎಂದು ಆಪಾದಿಸಿದರು.
ಸರ್ಕಾರ ಸ್ಪಂದಿಸಿಲ್ಲ: ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಂತಹ ವೇಳೆ ಅಡಕೆ ಬೆಳೆಗಾರರ ಸಾಕಷ್ಟು ಸಮಸ್ಯೆಗೆ ಸ್ಪಂದಿಸಿ, ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಡಕೆ ಬೆಳೆಗಾರರ ಸಮಸ್ಯೆಗಾಗಲಿ, ರೈತರ ಸಮಸ್ಯೆಯಾಗಾಗಲಿ ಸ್ಪಂದಿಸಿಲ್ಲ ಎಂದು ದೂರಿದರು.
ಅಡಕೆ ಬೆಳೆ ನಷ್ಟದ ಬಗ್ಗೆ ಸುಳ್ಳು ಮಾಹಿತಿ ನೀಡುವ ತೋಟಗಾರಿಕಾ ಇಲಾಖೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಶೇ.10ರಷ್ಟು ಜನ ಮಾತ್ರ ಖಾತೆ ಜಮೀನುಗಳಲ್ಲಿ ಅಡಕೆ ಬೆಳೆಯುತ್ತಿದ್ದು, ಬಗರ್ ಹುಕುಂ ಜಮೀನುಗಳಲ್ಲಿಯೂ ಬೆಳೆಯುವ ರೈತರು ಇದ್ದಾರೆ. ಇವರಿಗೂ ಪರಿಹಾರದ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಮುಂದಿನ ಒಂದೆರೆಡು ದಿನಗಳಲ್ಲಿ ಬಿಜೆಪಿಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಮಾಹಿತಿ ನೀಡಲಿದ್ದಾರೆ. ಅಲ್ಲದೇ, ಮುಖ್ಯಮಂತ್ರಿಗಳು ಸೋಮವಾರ ದೆಹಲಿಗೆ ತೆರಳಲಿದ್ದು, ಈ ವೇಳೆ ಬಿಜೆಪಿ ಸಂಸದರು ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ನೀಡಿ ಅಡಕೆ ಬೆಳೆಗಾರರ ಸಮಸ್ಯಗೆ ಸ್ಪಂದಿಸುವಂತೆ ಒತ್ತಾಯಿಸಲಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಒಂದು ವೇಳೆ ಸೆ.5ರೊಳಗೆ, ಸಮಸ್ಯೆ ಕುರಿತು ವಿಶೇಷ ಪ್ಯಾಕೇಜ್, ಸಾಲ ಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಜೀವರಾಜ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್. ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಕೋಟಾ ಶ್ರೀನಿವಾಸ್, ನಾಗರಾಜ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಡಿ.ಎಸ್. ಅರುಣ್, ಮಾಧ್ಯಮ ಪ್ರಮುಖ್ ಮಧುಸೂದನ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement