ಪ್ರಮುಖ ಯೋಜನೆಗಳು ಖಾತ್ರಿಗೆ ಜೋಡಣೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.26
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಉದ್ಯೋಗ ಖಾತ್ರಿ ಯೋಜನೆಯೊಂದಿಗೆ ಜೋಡಿಸಿದ್ದಾರೆ.
ಬಜೆಟ್ನಲ್ಲಿ ಘೋಷಿಸಿದ್ದ ಕೆರೆಗಳ ಪುನಶ್ಚೇತನ ಯೋಜನೆ, ನಮ್ಮ ಹೊಲ ನಮ್ಮ ದಾರಿ, ಒಕ್ಕಣೆ ಕಣ, ರಸ್ತೆ ಬದಿಯಲ್ಲಿ ಗಿಡ ನೆಡುವುದರ ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅವರ ಜಮೀನಲ್ಲಿಯೇ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅವಕಾಶ ನೀಡಿದ್ದಾರೆ. ನಗರದಲ್ಲಿ ಸೋಮವಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ಕಾರ್ಯಕ್ರಮಗಳ ವಿವರ ನೀಡಿದರು.
ಕೆರೆಗಳ ಪುನಶ್ಚೇತನ: ಪ್ರತಿ ಗ್ರಾಪಂನಲ್ಲಿ ಎರಡು ಕೆರೆ, ಗೋಕಟ್ಟೆ, ಕಲ್ಯಾಣಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶ. ಕೆರೆಗಳ ಸಮೀಕ್ಷೆ ಮಾಡಿ ಒತ್ತುವರಿಯನ್ನೂ ತೆರವು ಮಾಡಲಾಗುವುದು. ಕೆರೆಗಳಿಗೆ ಬರುವ ನೀರುಗಾಲುವೆ ಅಭಿವೃದ್ಧಿ, ಕೆರೆಗಳ ಬದು ಅಭಿವೃದ್ಧಿ, ಸರ್ವಿಸ್ ರಸ್ತೆಗಳ ಅಭಿವೃದ್ಧಿ, ರಾಜ ಕಾಲುವೆಗಳ ಅಭಿವೃದ್ಧಿ ನಂತರ ಕೆರೆಗಳ ಹೂಳೆತ್ತಲಾಗುವುದು. ಎಲ್ಲಾ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೊಂಡು ಗಾಂಧಿ ಜಯಂತಿ ದಿನದಂದು ಕಾಮಗಾರಿ ಆರಂಭವಾಗುವುದು.
ಒಕ್ಕಣೆ ಕಣ: ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ಕಣ ನಿರ್ಮಿಸಲಾಗುವುದು. ಇದರಿಂದ ಬತ್ತ ಬೆಳೆಯುವ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಮಾದರಿ ಅಂದಾಜು ಪಟ್ಟಿಯೊಂದಿಗೆ ಆಯಾ ಗ್ರಾಪಂಗಳು ಕಳಿಸಿದ ನೀಲನಕ್ಷೆಯನ್ನು ಹೋಲಿಸಿ ಅಗತ್ಯ ಬದಲಾವಣೆ ಮಾಡಿ ಅನುಷ್ಠಾನ ಮಾಡಲಾಗುವುದು.
ನಮ್ಮ ಹೊಲ ನಮ್ಮ ದಾರಿ: ಈಗಾಗಲೇ ಹೊಲಗಳ ನಡುವೆ ಹಾದುಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಮೊದಲ ಆದ್ಯತೆ. ಗ್ರಾಮ ನಕಾಶೆ ದಾಖಲೆಯಲ್ಲಿರುವ ರಸ್ತೆಗಳನ್ನು ಮೊದಲು ಅಭಿವೃದ್ಧಿಪಡಿಸಲಾಗುವುದು.
ರಸ್ತೆ ಸಂಪರ್ಕಕ್ಕೆ ಖಾಸಗಿ ಸ್ವತ್ತು ಅಗತ್ಯವಿದ್ದಲ್ಲಿ ಭೂಮಾಲೀಕರಿಂದ ದಾನಪತ್ರದ ಮೂಲಕ ಪಡೆದು ಕಾಮಗಾರಿ ಕೈಗೊಳ್ಳಲಾಗುವುದು. ಭೂಸ್ವಾದೀನಕ್ಕೆ ನರೇಗಾ ಹಣ ಬಳಸುವಂತಿಲ್ಲ. ಅಗತ್ಯವಿರುವ ಚಿಕ್ಕ ಸೇತುವೆ, ಮೋರಿ ಇತ್ಯಾದಿ ಕಾಮಗಾರಿಗೂ ಅವಕಾಶವಿದೆ. ಇತರೆ ಯೋಜನೆಗಳನ್ನೂ ಒಗ್ಗೂಡಿಸಬಹುದು.
ರಸ್ತೆ ಬದಿ ಮರ: ಬಿಹಾರದ ಮುಜಾಫರ್ಪುರ್ ಜಿಲ್ಲೆಯ ಮಾದರಿಯಲ್ಲಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೂ ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಸಸಿ ನೆಡವುದಕ್ಕಷ್ಟೇ ಅಲ್ಲದೇ 5 ವರ್ಷದ ಉಸ್ತುವಾರಿಗೂ ಸಹ ಅವಕಾಶವಿದೆ. ಇದಕ್ಕಾಗಿ ನೇಮಕವಾಗುವವರಿಗೆ ಖಾತ್ರಿ ಕೂಲಿ ದೊರೆಯುತ್ತದೆ. ಹಿರಿಯ ನಾಗರೀಕರಿಗೆ ಈ ಕೆಲಸ ಮಾಡಲು ಅವಕಾಶವಿದೆ.
ವೈಯಕ್ತಿಕ ಫಲಾನುಭವಿ: ಫಲಾನುಭವಿಗಳಿಗೆ ತಮ್ಮ ಜಮೀನುಗಳಲ್ಲಿ ನೀರಾವರಿ ಸೌಲಭ್ಯ, ತೋಟಗಾರಿಕೆ, ಗಿಡಗಳನ್ನು ನೆಡುವುದು, ನೆಡುತೋಪು ಬೆಳೆಸುವುದು, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಭೂ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ನೀಡುವ ಯೋಜನೆ ಇದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಪಿಎಲ್ ಕುಟುಂಬಗಳು, ಭೂಸುಧಾರಣೆ ಫಲಾನುಭವಿಗಳು, ಇಂದಿರಾ ಆವಾಸ್ ಯೋಜನೆ ಫಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿ ಪಜಾ-ಪಪಂ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲು ಅರ್ಹರು.
ಸಂಘಟನೆಗೆ ಅವಕಾಶ: ಒಂದೇ ಗ್ರಾಮದ ನಿವಾಸಿಗಳಾಗಿರುವ ನರೇಗಾ ಉದ್ಯೋಗ ಚೀಟಿ ಹೊಂದಿರುವ ಕಾಯಕ ಸಂಘವನ್ನು ರಚಿಸಿಕೊಂಡು ಈ ಮೂಲಕ ಸೌಲಭ್ಯಕ್ಕಾಗಿ ದನಿ ಎತ್ತುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಸಂಘಗಳು ರಚನೆಯಾಗಿವೆ.
ಕಾಯಕ ಸಂಘವು ಒಮ್ಮೆ ಸಂಘಟನೆಯಾದ ನಂತರ ಒಂದು ಗುಂಪಾಗಿ ಕಾಮಗಾರಿಗೆ ಮನವಿ ಸಲ್ಲಿಸಬಹುದು. ಈ ಬಗ್ಗೆ ಪ್ರತಿ ಗ್ರಾಮ ಪಂಚಾಯ್ತಿಗೆ ಒಬ್ಬ ನೋಡಲ್ ಅಧಿಕಾರಿಯನ್ನೂ ನೇಮಿಸಲಾಗುವುದು.