ಸೇವೆಯ ಅರ್ಥ ತೋರಿಸಿದ ಥೆರೆಸಾ: ನಾ. ಡಿಸೋಜ
ಸಾಗರ: ನಾವು ಯಾರನ್ನು ಕರುಣೆಯಿಂದ ನೋಡುತ್ತೇವೋ ಅವರಿಗೆ ಸೇವೆ ಮಾಡಬೇಕು. ಯಾರ ಸೇವೆಯನ್ನು ಮಾಡುತ್ತೇವೋ ಅವರನ್ನು ಕರುಣೆಯಿಂದ ನೋಡಿದಾಗ ಮಾತ್ರ ಈ ಎರಡು ಪದಕ್ಕೆ ನಿಜಾರ್ಥ ಬರುತ್ತದೆ ಎಂದು ಸಾಹಿತಿ ಡಾ.ನಾ. ಡಿಸೋಜ ಹೇಳಿದರು.
ಇಲ್ಲಿನ ಸಾಧನಾ ಸೋಶಿಯಲ್ ವೆಲ್‌ಫೇರ್ ಟ್ರಸ್ಟ್ ಹಾಗೂ ಸಾಧನಾ ಸ್ವಸಹಾಯ ಸಂಘ ಮದರ್ ಥೆರೆಸಾ ಅವರ 113ನೇ ಜನ್ಮ ದಿನಾಚರಣೆ ಅಂಗವಾಗಿ ಸೆಂಟ್ ಥಾಮಸ್ ಚರ್ಚಿನ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವೃದ್ಧರಿಗೆ ವಸ್ತ್ರ ಹಾಗೂ ಆಹಾರಧಾನ್ಯ ವಿತರಣೆ ಮಾಡಿ ಅವರು ಮಾತನಾಡಿದರು.
ಮಾದರಿ ಟ್ರಸ್ಟ್: ಕರುಣೆ ಹಾಗೂ ಸೇವೆಯ ನಿಜವಾದ ಅರ್ಥ ಏನು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಥೆರೆಸಾ ಅವರಿಗೆ ಸಲ್ಲುತ್ತದೆ. ನೋವು ಹಾಗೂ ಸಂಕಟದಲ್ಲಿರುವವರನ್ನು ದೇವರು ನೋಡಿಕೊಳ್ಳುತ್ತಾನೆ ಎನ್ನುವುದಕ್ಕಿಂತ ಮನುಷ್ಯರಾಗಿ ನಮ್ಮ ಕರ್ತವ್ಯ ಏನು, ನೊಂದವರಿಗೆ ಯಾವ ರೀತಿ ಧ್ವನಿಯಾಗಬೇಕು ಎನ್ನುವ ಚಿಂತನೆ ಅಗತ್ಯ. ಈ ನಿಟ್ಟಿನಲ್ಲಿ ಸಾಧನಾ ಸೋಶಿಯಲ್ ಟ್ರಸ್ಟ್ ಇಂತಹ ಸಮಾಜಮುಖಿ ಚಿಂತನೆ ನಡೆಸುತ್ತಿರುವುದು ಇತರೆ ಸಂಘಟನೆಗಳಿಗೆ ಮಾದರಿ ಎಂದು ಹೇಳಿದರು. ಲೇಖಕ ವಿಲಿಯಂ, ಸೇವೆ ಎನ್ನುವ ಶಬ್ದ ತನ್ನ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಇಂತಹ ಸವಾಲಿನ ದಿನಗಳಲ್ಲಿ ಕೆಲವು ಸಂಘಟನೆಗಳು ಸೇವೆಯ ಮಹತ್ವವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ. ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಶಾಂತಿಯನ್ನು ಪ್ರತಿಷ್ಠಾಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಂಘಟನೆಯ ಅಧ್ಯಕ್ಷ ಸಬಾಸ್ಟಿನ್ ಗೋಮ್ಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಟೀಟೂ, ಸಾಮಾಜಿಕ ಕಾರ್ಯಕರ್ತ ಅಮೃತರಾಸ್, ಫೆಲಿಕ್ ಸ್ಗುಡಿನೋ ಇದ್ದರು.
ತಪಾಸಣಾ ಶಿಬಿರ
ಶಿವಮೊಗ್ಗ: ಜಯಕರ್ನಾಟಕ ಜಿಲ್ಲಾ ಘಟಕ ಹಾಗೂ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಆ.28ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4 ಗಂಟೆವರೆಗೆ ಜ್ಯುವೆಲ್ ರ್ಯಾಕ್ ಹೋಟೆಲ್‌ನ ಮಿಲನ್‌ಹಾಲ್‌ನಲ್ಲಿ ಉಚಿತ ಹೃದಯ ರೋಗ, ಮೂಳೆ ಮತ್ತು ಕೀಲು ನೋವು ತಪಾಸಣ ಶಿಬಿರ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಯಾಗಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಬಿ. ದಯಾಳ್, ಜಿಲ್ಲಾ ಆರೋಗ್ಯಾಧಿಕಾರಿ ಶಿವಣ್ಣರೆಡ್ಡಿ, ಸಿಮ್ಸ್ ನಿರ್ದೇಶಕ ಕೆ.ಎಸ್. ಗಂಗಾಧರ್ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಜಿಲ್ಲಾ ಘಟಕ ಅಧ್ಯಕ್ಷ ಎ. ಸುರೇಶ್ ರೈ ವಹಿಸಲಿದ್ದು, ಕಾರ್ಯಾಧ್ಯಕ್ಷ ಬಿ.ಎ. ಸುರೇಶ್ ಶೆಟ್ಟಿ ಉಪಸ್ಥಿತರಿರುವರು.
ಕ್ಷತ್ರಿಯಾ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನ
ಶಿವಮೊಗ್ಗ: ಕ್ಷತ್ರಿಯಾ ಕ್ಷೇಮಾಭಿವೃದ್ಧಿ ಸಂಘವು ಎಪಿಎಂಸಿ ಯಾರ್ಡ್‌ನ ಅಡಕೆ ಮಂಡಿ ವರ್ತಕರ ಸಭಾಭವನದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹಾಗೂ ನಗರಸಭೆ ಸದಸ್ಯ ಜಿ. ನರಸಿಂಹಮೂರ್ತಿ ಅವರಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಸ್ವಾತಂತ್ರ್ಯ ಸಂಗ್ರಾಮದ ನಂತರ ಮರಾಠರು ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದು, ರಕ್ಷಣೆ ಕೋರುವವರಿಗೆ ಆಶ್ರಯ ನೀಡುವ ಹಾಗೂ ಸ್ವಾಭಿಮಾನಿ ಸಮಾಜ. ಮರಾಠರ ದೊರೆ ಶಿವಾಜಿ ಮಹಾರಾಜರ ಜೀವನ ಅನುಕರಣೀಯ ಎಂದು ಬಣ್ಣಿಸಿದರು.
ಪ್ರೋತ್ಸಾಹ ಅಗತ್ಯ: ಇದೀಗ ಆರಂಭವಾಗಿರುವ ಈ ಸಂಘ ಹಾಗೂ ಮೊದಲ ಬಾರಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ನಾನು ಒಂದೇಯಾಗಿದ್ದು, ಇಬ್ಬರಿಗೂ ತಾವೆಲ್ಲರೂ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಜಿ. ನರಸಿಂಹಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಮಂಜೋಜಿರಾವ್ ಸೂರ್ಯವಂಶಿ ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಷಡಕ್‌ರಾಜ್ ಕರಾಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷತ್ರೀಯ ಮರಾಠ ಪರಿಷತ್ತಿನ ನಗರ ಸಮಿತಿ ಅಧ್ಯಕ್ಷ ಶಿವಕುಮಾರ್ ಪವಾರ್, ಸಂಘದ ಕಾರ್ಯದರ್ಶಿ ಸತೀಶ್ ಬಾಬುರಾವ್, ನಾರಾಯಣರಾವ್ ಸಿಂಧೆ ಮತ್ತಿತರರು ಇದ್ದರು.