ಕೃಷ್ಣ- ರಾಧೆ ವೇಷದಲ್ಲಿ ಸಂಭ್ರಮಿಸಿದ ಮಕ್ಕಳು
ಶಿವಮೊಗ್ಗ: ಬುಧವಾರ ರೋಟರಿ ಪೂರ್ವ ಸಭಾಂಗಣದಲ್ಲಿ ಶ್ರೀಕೃಷ್ಣ-ರಾಧೆಯರ ಅವತರಣವಾಗಿತ್ತು. ಕೃಷ್ಣ- ರಾಧೆಯ ಹಾವಭಾವಗಳನ್ನು ಹೋಲುವಂತೆ ಮುದ್ದು ಕಂದಮ್ಮಗಳು ವೇಷತೊಟ್ಟು ಸಂಭ್ರಮಿಸಿದರು.
ಕೃಷ್ಣಜನ್ಮಾಷ್ಟಮಿ ಅಂಗವಾಗಿ ರೋಟರಿ ಪೂರ್ವ ಸಂಸ್ಥೆ ಕೃಷ್ಣ ಹಾಗೂ ರಾಧೆಯರ ವೇಷಭೂಷಣ ಸ್ಪರ್ಧೆ ಹಾಗೂ ಗೀತೆಗಳ ಸ್ಪರ್ಧೆ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಜಿ. ವಿಜಯಕುಮಾರ್, ಮಕ್ಕಳ ಪ್ರತಿಭೆಗೆ ಪೋಷಕರ ಪ್ರೋತ್ಸಾಹ ಅಗತ್ಯ. ಚಿಕ್ಕವರಿದ್ದಾಗಿನಿಂದ ಮಕ್ಕಳಿಗೆ ಸಾಂಸ್ಕೃತಿಕ ನೆಲೆಗಟ್ಟನ್ನು ರೂಪಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಅತಿ ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಕಲೆ, ಸಂಸ್ಕೃತಿ ತಿಳಿಸಿ: ಮಕ್ಕಳಿಗೆ ಸಕಾಲದಲ್ಲಿ ಸರಿಯಾದ ಸಂಸ್ಕಾರ ಹಾಗೂ ಕಲೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಿದಲ್ಲಿ ಮುಂದೆ ಮಕ್ಕಳು ಸುಸಂಸ್ಕೃತರಾಗುತ್ತಾರೆ ಎಂದು ಹೇಳಿದರು.
ಪೋಷಕರು ಚಿಕ್ಕಮಕ್ಕಳಲ್ಲಿ ಕೃಷ್ಣನ ರೂಪ ಹಾವ ಭಾವಗಳನ್ನು ನೋಡಲು ಬಯಸುತ್ತಾರೆ. ಇಂತಹ ಕಾರ್ಯಕ್ರಮಗಳು ಮನಸ್ಸಿಗೆ ಮುದನೀಡುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಮನಸ್ಸನ್ನು ಅರಳಿಸುವುದರ ಜೊತೆಗೆ ಕಾಯಿಲೆಗಳನ್ನು ದೂರಮಾಡುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಇನ್ನರ್ವ್ವೀಲ್ ಅಧ್ಯಕ್ಷೆ ಸುಜಯ ಪುರುಷೋತ್ತಮ್ ಅವರು ಭಾಗವಹಿಸಿದ 60 ಮಕ್ಕಳಿಗೆ ಬಹುಮಾನ ಹಾಗೂ ಸಿಹಿ ನೀಡಿ ಗೌರವಿಸಿದರು. ಕಾರ್ಯಕ್ರಮದ ತೀರ್ಪುಗಾರರಾಗಿ ನಿರ್ಮಲ ಮಹೇಂದ್ರ, ಬಿಂದು ವಿಜಯಕುಮಾರ್ ಹಾಗೂ ನಮಿತಾ ಸೂರ್ಯನಾರಾಯಣ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಕಾರ್ಯದರ್ಶಿ ಶ್ವೇತಾ ಆಶಿತ್, ಮುಖ್ಯೋಪಾಧ್ಯಾಯರಾದ ವಿಶಾಲಕ್ಷಮ್ಮ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.