ಶಿಕ್ಷಕ ಪ್ರಶಸ್ತಿ ಆಯ್ಕೆ ಅವ್ಯವಹಾರ
ಶಿವಮೊಗ್ಗ: ಪ್ರತಿ ಬಾರಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಕೊಡಮಾಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದ್ದು, ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದ ಪೂರ್ಯಾನಾಯ್ಕ್ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಈ ಬಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡು ಬಂದಿದ್ದು, ಅರ್ಹರನ್ನು ಆಯ್ಕೆ ಮಾಡುವಲ್ಲಿ ಆಯ್ಕೆ ಸಮಿತಿ ವಿಫಲವಾಗಿದೆ. ಅಲ್ಲದೇ, ಪ್ರಭಾವಿ ವ್ಯಕ್ತಿಯೊಬ್ಬರ ಪತ್ನಿಗೆ ನೀಡಲಾಗಿದೆ.
ಈ ಬಗ್ಗೆ ಸೂಕ್ತ ಮಾಹಿತಿ ಒದಗಿಸುವಂತೆ ಇಲಾಖೆ ಪತ್ರ ಬರೆದಿದ್ದಾರೆ. ಆದರೆ, ಇಲಾಖೆಯಿಂದ ಇದುವರೆಗೂ ಸ್ಪಂದನೆ ದೊರೆತಿಲ್ಲ ಎಂಬುದು ಶಾಸಕರ ಆರೋಪ.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಮಾಡುವಾಗ ತಾಲೂಕು ಮಟ್ಟದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ, 6 ಜನ ಪ್ರಾಥಮಿಕ ಶಾಲಾ ಶಿಕ್ಷಕರನ್ನು 4 ಮಂದಿ ಪ್ರೌಢಶಾಲಾ ಶಿಕ್ಷಕರನ್ನು ಆಯ್ಕೆ ಮಾಡಿ ಜಿಲ್ಲಾ ಸಮಿತಿಗೆ ಕಳುಹಿಸಬೇಕು. ನಂತರ ಜಿಲ್ಲಾ ಸಮಿತಿ ತಾಲೂಕಿಗೆ ಒಬ್ಬರಂತೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತ್ತು ಜಿಲ್ಲೆಯಿಂದ ಐದು ಮಂದಿ ಪ್ರೌಢಶಾಲಾ ಶಿಕ್ಷಕರನ್ನು ಪ್ರಶಸ್ತಿಗೆ ಮಾನ್ಯ ಮಾಡುತ್ತದೆ.
ಆದರೆ, ಶಿವಮೊಗ್ಗ ತಾಲೂಕು ಮಟ್ಟದಲ್ಲಿ ಸಮಿತಿ ಇಲಾಖೆ ಮಾನದಂಡಗಳನ್ನು ಬದಿಗೊತ್ತಿ ಪ್ರಶಸ್ತಿಗೆ ಕೆಲವರ ಹೆಸರುಗಳನ್ನು ಶಿಫಾರಸ್ಸು ಮಾಡಿದೆ.
ಈ ಸಂಬಂಧವಾಗಿ ಶಿವಮೊಗ್ಗ ತಾಲೂಕು ಸಮಿತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ, ಆಯ್ಕೆ ಸಮಿತಿ ಅನುಸರಿಸಿದ ಮಾನದಂಡಗಳು, ಸಮಿತಿಯ ಸಭಾ ನಡವಳಿಕೆಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?: ಶಾಸಕರು ಪತ್ರದಲ್ಲಿ ತಿಳಿಸಿರುವಂತೆ, ತಾಲೂಕು ಮಟ್ಟದಲ್ಲಿ ಅರ್ಹ ಶಿಕ್ಷಕರನ್ನು ಕಡೆಗಣಿಸಿ, ತಮಗೆ ಬೇಕಾದವರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ. ನಿಯಮಾವಳಿಯಂತೆ 6 ಮಂದಿ ಪ್ರಾಥಮಿಕ ಶಿಕ್ಷಕರು ಹಾಗೂ 4 ಜನ ಪ್ರೌಢಶಾಲಾ ಶಿಕ್ಷಕರ ಹೆಸರು ಶಿಫಾರಸ್ಸು ಮಾಡಬೇಕು. ಅದಕ್ಕೂ ಮುನ್ನ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು.
ಆದರೆ, ಇದಾವುದನ್ನು ಇಲಾಖೆ ಅಧಿಕಾರಿಗಳು ಮಾಡದೇ, ನಿಯಮಗಳನ್ನು ಪಾಲಿಸದೆ ತಾಲೂಕಿನ 4 ಜನ ಪ್ರಾಥಮಿಕ ಹಾಗೂ ಇಬ್ಬರು ಪ್ರೌಢಶಾಲಾ ಶಿಕ್ಷಕರ ಹೆಸರನ್ನು ಮಾತ್ರ ಶಿಫಾರಸ್ಸು ಮಾಡಲಾಗಿದ್ದು, ತಾಲೂಕಿನಲ್ಲಿ ಅರ್ಹ ಶಿಕ್ಷಕರೇ ಇಲ್ಲವೆಂಬಂತೆ ಬಿಂಬಿಸಲಾಗಿದೆ.
ಗೋವಿಂದಗೌಡರ ಪ್ರಶಸ್ತಿಗೆ ಶಿಫಾರಸು: ಪ್ರತಿವರ್ಷ ವಿಭಾಗಮಟ್ಟದಲ್ಲಿ ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದಗೌಡರ ಹೆಸರಿನಲ್ಲಿ ಉತ್ತಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಎರಡು ಶಾಲೆಗಳನ್ನು ಆಯ್ಕೆ ಮಾಡಿ ಶಿಫಾರಸ್ಸು ಮಾಡಲಾಗಿದೆ.
ಹೊಸನಗರ ತಾಲೂಕಿನ ಬಿದರಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಿವಮೊಗ್ಗ ತಾಲೂಕು ಪಿಳ್ಳಂಗೆರೆಯ ಸರ್ಕಾರಿ ಪ್ರೌಢಶಾಲೆ ಪ್ರಶಸ್ತಿಗೆ ಶಿಫಾರಸುಗೊಂಡಿವೆ. ಈ ಬಗ್ಗೆ ಸಂಬಂಧವಾಗಿ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಸ್. ಕುಮಾರ್, ನಿಯಮಾವಳಿಯನ್ನು ಉಲ್ಲಂಘಿಸಿದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಇನ್ನೆರಡು ದಿನದಲ್ಲಿ ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಬೇಕಿದೆ. ಅಷ್ಟರಲ್ಲಿ, ತಾಲೂಕು ಸಮಿತಿ ಕಳುಹಿಸಿದ್ದ ಪಟ್ಟಿ ಮತ್ತು ಅನುಸರಿಸಿದ ಕ್ರಮವನ್ನು ಪುನರ್ಪರಿಶೀಲಿಸಲಾಗುವುದು ಎಂದರು.