ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಂತ್ವನ ಯೋಜನೆ ಅನುದಾನ ಹೆಚ್ಚಳಕ್ಕೆ ಒತ್ತಾಯ

Mainashree
Updated On : 29 Aug 2013, 11:52 am

ಸಾಗರ: ಸಾಂತ್ವನ ಯೋಜನೆಗೆ ಬಿಡುಗಡೆಯಾಗುತ್ತಿರುವ ಅನುದಾನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿ ಜಿಲ್ಲೆಯ ಸಾಂತ್ವನ ವಿಭಾಗದ ಸಿಬ್ಬಂದಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣದ ಉದ್ದೇಶದಿಂದ 2001ರಲ್ಲಿ ಸಾಂತ್ವನ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಒಟ್ಟು 173 ಸಾಂತ್ವನ ಕೇಂದ್ರಗಳು ಸರ್ಕಾರೇತರ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವ್ವಹಿಸಿಕೊಂಡು ಬರುತ್ತಿದೆ.
 ಸದರಿ ಕೇಂದ್ರಗಳಲ್ಲಿ ನೊಂದ ಮಹಿಳೆಯರಿಗೆ ಸೂಕ್ತವಾದ ನೆರವನ್ನು ಆಪ್ತ ಸಮಾಲೋಚನೆ ಮೂಲಕ ಹಾಗೂ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಕಾನೂನಿನ ನೆರವನ್ನು ಉಚಿತವಾಗಿ ನೀಡಿಕೊಂಡು ಬರಲಾಗುತ್ತಿದೆ.
24 ಗಂಟೆಯೂ ಕೆಲಸ: ಮಹಿಳೆಯರ ಕೌಟುಂಬಿಕ ಸಮಸ್ಯೆ, ವರದಕ್ಷಿಣೆ ಕಿರುಕುಳ, ದೌರ್ಜನ್ಯ, ಅತ್ಯಾಚಾರ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರವು ದಿನದ 24 ಗಂಟೆಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಪ್ರತಿ ಸಾಂತ್ವನ ಕೇಂದ್ರದಲ್ಲಿ ಒಬ್ಬರು ಕೌಟುಂಬಿಕ ಸಲಹೆಗಾರರು, ಮೂವರು ಸಮಾಜ ಸೇವಾ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಚೇರಿ ನಿರ್ವಹಣೆಗೆ ಸಾದಿಲ್ವಾರು ವೆಚ್ಚ, ದೂರವಾಣಿ ವೆಚ್ಚ, ಕಟ್ಟಡ ಬಾಡಿಗೆ, ಸಿಬ್ಬಂದಿ ವೇತನಕ್ಕೆ ಬಿಡುಗಡೆಯಾಗುತ್ತಿರುವ ಅನುದಾನವು ಸೀಮಿತವಾಗಿದೆ.
ಕೌಟುಂಬಿಕ ಸಲಹೆಗಾರರಿಗೆ 6 ಸಾವಿರ ಮತ್ತು ಸಮಾಜ ಕಾರ್ಯಕರ್ತರಿಗೆ 3 ಸಾವಿರ ವೇತನ ನೀಡಲಾಗುತ್ತಿದೆ. ಇದು ದಿನಗೂಲಿ ನೌಕರರಿಗೆ ಕೊಡುತ್ತಿರುವ ವೇತನಕ್ಕಿಂತ ಕಡಿಮೆಯಾಗಿದೆ.
ಇದರಿಂದ ಕರ್ತವ್ಯ ನಿರ್ವಹಿಸಲು ಹಾಗೂ ಕಚೇರಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ವೇತನ ಹೆಚ್ಚಿಸಿ: ಆದ್ದರಿಂದ ಕೌಟುಂಬಿಕ ಸಲಹೆಗಾರರಿಗೆ 12 ಸಾವಿರ, ಸಮಾಜ ಕಾರ್ಯಕರ್ತರಿಗೆ 6 ಸಾವಿರ, ಕಟ್ಟಡ ಬಾಡಿಗೆಯನ್ನು ಪ್ರತಿ ತಿಂಗಳಿಗೆ 3500, ದೂರವಾಣಿ ವೆಚ್ಚ ಬಾಬ್ತು ರೂ. ಒಂದು ಸಾವಿರ, ಮತ್ತು ಸಾದಿಲ್ವಾರು ವೆಚ್ಚವನ್ನು 1500ಗಳಿಗೆ ಹೆಚ್ಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಹಿಳಾ ಸಾಂತ್ವನ ಕೇಂದ್ರದ ಸಾಗರ ಶಾಖೆಯ ರಶ್ಮಿ ಎಲ್., ಶಿವಮೊಗ್ಗ ಶಾಖೆಯ ರಶ್ಮಿ ಎಚ್.ಎಸ್., ಭದ್ರಾವತಿಯ ಶಾಂತಾ ಎಸ್., ಹೊಸನಗರದ ಜಯಂತಿ ವೈ.ಕೆ., ತೀರ್ಥಹಳ್ಳಿಯ ಪ್ರಜ್ವಲ್ ಕೆ.ವೈ., ಸೊರಬದ ಚೇತನ ಕೆ.ಪಿ., ಕೆ.ಭಾಗ್ಯ, ಸರೋಜ, ಎನ್.ಲಲಿತಮ್ಮ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement