ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಧಿಕಾರಿಗಳಿಗೆ ಘೇರಾವ್....

Lingaraj Badiger
Updated On : 30 Aug 2013, 11:07 am

ಕ.ಪ್ರ.ವಾರ್ತೆ, ಸೊರಬ, ಆ.29
ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ ಗ್ರಾಪಂ, ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ಹಣ ನೀಡದೇ ನಿರ್ಲಕ್ಷ್ಯ ತೋರುತ್ತಿದ್ದು, ಇದಕ್ಕೆ ಪಿಡಿಒ ಪರಮೇಶಿಯವರೇ ಕಾರಣ ಎಂದು ಆರೋಪಿಸಿ ಗ್ರಾಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಕಚೇರಿಗೆ ಬೀಗ ಹಾಕಿ ಅಧಿಕಾರಿಳಿಗೆ ಘೇರಾವ್ ಹಾಕಿದ ಘಟನೆ ಗುರುವಾರ ಕೊಡಚಣಿ ಗ್ರಾಪಂ ಕಚೇರಿ ಆವರಣದಲ್ಲಿ ನಡೆಯಿತು.
ಸಭೆಗೆ ನೊಡಲ್ ಅಧಿಕಾರಿ ಜಿ.ಡಿ. ನಾಯ್ಕ್ ಹೊರತುಪಡಿಸಿ, ಬೇರೆ ಯಾವುದೇ ಇಲಾಖೆ ಅಧಿಕಾರಿಗಳು ಬಂದಿರಲಿಲ್ಲ. ಇದ್ದರಿಂದ ಆಕ್ರೋಶಗೊಂಡ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು, ಅಧಿಕಾರಿಗಳು ಸಭೆಗೆ ಹಾಜರಾಗಿ ಸಮಸ್ಯೆ ಬಗ್ಗೆ ಚರ್ಚಿಸಿ, ಪರಿಹಾರ ನೀಡುವವರೆಗೆ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ, ಸಭೆಯಿಂದ ಹೊರ ನಡೆದರು.
2 ತಿಂಗಳು ಕೆಲಸ: ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ, ಸುಮಾರು 200 ಜನರು 2 ತಿಂಗಳ ಕಾಲ ಕೆಲಸ ಮಾಡಿದ್ದಾರೆ. ಪ್ರತಿದಿನ ಕಾರ್ಮಿಕರು ಮಾಡಿದ ಕೆಲಸದ ಅಳತೆ ತೆಗೆದುಕೊಳ್ಳಬೇಕು ಎಂಬ ಕಾನೂನು ಇದೆ. ಆದರೆ, ಯಾವೊಬ್ಬ ಅಧಿಕಾರಿಯೂ ಅಳತೆ ನಡೆಸದೇ, ಮಳೆ ಸುರಿದ ನಂತರ ಇದೀಗ ಅಳತೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದಿಂದ ಈ ಹಿಂದೆಯೇ ಉದ್ಯೋಗ ಖಾತರಿಯ ಹಣ ಪಾವತಿಸಲು ಆದೇಶ ಬಂದಿದ್ದರೂ, ಆದೇಶವನ್ನು ಧಿಕ್ಕರಿಸಿದ್ದಾರೆ. ಇನ್ನೂ ಕೆಲವು ಕಾಮಗಾರಿ ನಡೆದು 5 ತಿಂಗಳೇ ಕಳೆದರೂ, ಫಲಾನುಭವಿ ಖಾತೆಗೆ ಹಣ ಜಮಾ ಮಾಡದೇ ಜೀವನದೊಂದಿಗೆ ಚೆಲ್ಲಾಟ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಪಿಡಿಒ ಅವರೇ ಕಾರಣ ಎಂದು ದೂರಿದರು.
ಬೀದಿ ದೀಪ ಹಾಳು: ಗ್ರಾಮದಲ್ಲಿ 6 ತಿಂಗಳಿನಿಂದ ಬೀದಿ ದೀಪ ಹಾಳಾಗಿವೆ. ಸದಸ್ಯರು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ, ಜನಪ್ರತಿನಿಧಿಗಳ ಮನವಿಗೆ ಸ್ಪಂದನೆ ನೀಡುತ್ತಿಲ್ಲ. ಈ ಅಧಿಕಾರಿ ಕೂಡ ಪ್ರಭಾರ ಅಧಿಕಾರಿಯಾಗಿದ್ದಾರೆ.
3 ವರ್ಷದಿಂದ ಕಾರ್ಯದರ್ಶಿ, 6 ತಿಂಗಳಿನಿಂದ ಬಿಲ್ ಕಲೆಕ್ಟರ್ ಇಲ್ಲದೇ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಕಚೇರಿಗೆ ಹೋದರೆ ಸಿಬ್ಬಂದಿ ಕೊರತೆ ನೆಪ ಹಾಗೂ ದಾಖಲೆ  ನೀಡಲು ಸತಾಯಿಸುತ್ತಾ, ಹಣಕ್ಕಾಗಿ ಒತ್ತಡ ಹೇರುತ್ತಿದ್ದಾರೆ. ಕೂಡಲೇ ಗ್ರಾಪಂಗೆ ಖಾಯಂ ಪಿಡಿಒ, ಬಿಲ್ ಕಲೆಕ್ಟರ್, ಕಾರ್ಯದರ್ಶಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.  
ಸಂಚಾರ ಅಸ್ತವ್ಯಸ್ತ: ಇತ್ತೀಚೆಗೆ ಗ್ರಾಪಂ ವ್ಯಾಪ್ತಿಯ ಬೋಲಗಟ್ಟೆ ಕೆರೆ ಏರಿ ಒಡೆದು, ಸಂಚಾರ ಅಸ್ತವ್ಯಸ್ಥಗೊಂಡಿತ್ತು. ತಾತ್ಕಾಲಿಕ ದುರಸ್ತಿಗಾಗಿ ರು. 2 ರಿಂದ 3 ಲಕ್ಷ ವೆಚ್ಚ ಮಾಡಿ, ಮರಳಿನ ಚೀಲಗಳನ್ನು ಹಾಕಿ ರು. 15 ಲಕ್ಷ ಬಿಲ್ ನೀಡುವ ಅಧಿಕಾರಿಗಳು, ಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕರ ಹಣ ನೀಡಲು ಸತಾಯಿಸುತ್ತಿರುವುದು ಏತಕ್ಕಾಗಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನೋಡಲ್ ಅಧಿಕಾರಿ ಜಿ.ಡಿ. ನಾಯ್ಕ್, ಪಿ.ಡಿ.ಒ ಪರಮೇಶಿ, ಗ್ರಾಪಂ ಅಧ್ಯಕ್ಷ ಹೂವಾನಾಯ್ಕ್, ಉಪಾಧ್ಯಕ್ಷೆ ನಾಗರತ್ನಮ್ಮ, ಗ್ರಾಪಂ ಸದಸ್ಯರು, ತಾಪಂ ಉಪಾಧ್ಯಕ್ಷೆ ನೀಲಮ್ಮ ಸುರೇಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement