ಅಧ್ಯಕ್ಷ ಗಾದಿಗೆ ಪೈಪೋಟಿ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಆ.29
ಕಳೆದ 5 ತಿಂಗಳ ಹಿಂದೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು, ಒಂದಲ್ಲ ಒಂದು ಕಾರಣದಿಂದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯದೇ, ಈಗ ಸರ್ಕಾರ ಮೀಸಲಾತಿ ಹೊರಡಿಸುತ್ತಿದ್ದಂತೆಯೇ ಅಧ್ಯಕ್ಷರು ಯಾರಾಗಬೇಕು ಎಂಬ ಬಗ್ಗೆ ಭಾರಿ ಪೈಪೋಟಿ ಪ್ರಾರಂಭವಾಗಿದೆ.
ಶಿರಾಳಕೊಪ್ಪ ಪಪಂಗೆ ಸಾಮಾನ್ಯ ಮಹಿಳೆ ಅಧ್ಯಕ್ಷೆ ಹಾಗೂ ಬಿಸಿಎಂ ಮಹಿಳೆ ಉಪಾಧ್ಯಕ್ಷೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ. ಆದರೆ ಈವರೆಗೆ ಮೀಸಲಾತಿ ಹೇಗೆ ಬರುತ್ತದೆ ಎಂದು ಲೆಕ್ಕಾಚಾರ ಹಾಕುತ್ತಿದ್ದವರಿಗೆ ಮಹಿಳಾ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಅಧ್ಯಕ್ಷ ಗಾದಿಗೆ ಏರಲು ಮಹಿಳೆಯರಲ್ಲಿ ತೀವ್ರ ಪೈಪೋಟಿ ಪ್ರಾರಂಭವಾಗಿದೆ.
15 ಸದಸ್ಯ ಬಲ: ಪಪಂ ಒಟ್ಟು 15 ಸದಸ್ಯಬಲ ಹೊಂದಿದ್ದು, ಕೆಜೆಪಿಯ 5 ಸದಸ್ಯರು, ಕಾಂಗ್ರೆಸ್ 5 ಸದಸ್ಯರು ಜೆಡಿಎಸ್ 1, ಬಿಎಸ್ಆರ್ ಕಾಂಗ್ರೆಸ್ 1 ಹಾಗೂ ಪಕ್ಷೇತರರು 3 ಸದಸ್ಯರಿದ್ದಾರೆ. ಒಟ್ಟು 6 ಮಹಿಳಾ ಸದಸ್ಯರು ಆಯ್ಕೆ ಆಗಿದ್ದು, ಎಲ್ಲರೂ ನಾವೇಕೆ ಅಧ್ಯಕ್ಷರಾಗಬಾರದು ಎಂದು ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ನಲ್ಲಿ ಇಬ್ಬರು ಮಹಿಳೆಯರಿದ್ದು, ಕೆಜೆಪಿಯಲ್ಲಿ ಒಬ್ಬರು, ಜೆಡಿಎಸ್ನಿಂದ ಒಬ್ಬರು, ಬಿಎಸ್ ಆರ್ ಕಾಂಗ್ರೆಸ್ನಿಂದ ಒಬ್ಬರು ಹಾಗೂ 5ನೇವಾರ್ಡಿನ ಮಹಿಳೆ ಅವಿರೋಧವಾಗಿ ಆಯ್ಕೆಆಗಿದ್ದಾರೆ,
ಕಾಂಗ್ರೆಸ್ ಸದಸ್ಯರು ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎಂದು ಕಳೆದ ಒಂದು ತಿಂಗಳ ಹಿಂದಿನಿಂದಲೇ ಪಕ್ಷೇತರರು ಹಾಗು ಇತರರೊಡಗೂಡಿ ಪ್ರಯತ್ನ ನಡೆಸಿದ್ದರು. ಆದರೆ ಈಗ ಒಮ್ಮತ ಮೂಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ನಾಳೆ ಓಟದ ಸ್ಪರ್ಧೆ
ಶಿವಮೊಗ್ಗ: ನಗರದ ಪೃಥ್ವಿ ವೆಲ್ಫೇರ್ ಟ್ರಸ್ಟ್ ಮೊದಲನೇ ವಾರ್ಷಿಕೋತ್ಸವ ಹಾಗೂ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 1ರಂದು ಬೆಳಿಗ್ಗೆ 6.30ಕ್ಕೆ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ನಗರದ 4ನೇ ತರಗತಿಯಿಂದ 7ನೇ ತರಗತಿಯ ಹಾಗೂ 8ರಿಂದ 10ನೇ ತರಗತಿಯ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ 4 ವಿಭಾಗಗಳಲ್ಲಿ ನಗರದ ಗೋಪಿ ವೃತ್ತದಿಂದ ರಸ್ತೆ ಓಟದ ಸ್ಪರ್ಧೆ ನಡೆಯುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಅಂದು ಬೆಳಿಗ್ಗೆ 6.15ಕ್ಕೆ ಶಾಲಾ ಗುರುತಿನ ಚೀಟಿಯೊಂದಿಗೆ ಗೋಪಿ ವೃತ್ತದಲ್ಲಿ ಹಾಜರಿರುವಂತೆ ಸಂಸ್ಥೆ ತಿಳಿಸಿದೆ.
ಬೆಳಿಗ್ಗೆ 11ಕ್ಕೆ ಟ್ರಸ್ಟ್ನಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಸದಸ್ಯರು ಮತ್ತು ಆಸಕ್ತರು ಸಂಜೀವಿನಿ ರೆಡ್ಕ್ರಾಸ್ ಬ್ಲಡ್ ಬ್ಯಾಂಕಿಗೆ ಆಗಮಿಸುವಂತೆ ಸಂಸ್ಥೆಯ ಅಧ್ಯಕ್ಷ ಮಹೇಶ್ ಕೋರಿದ್ದಾರೆ. ಮೊ- 9986622184 ಸಂಪರ್ಕಿಸಿ.