ವಿದ್ಯಾರ್ಥಿಗಳು ದೇಶಭಕ್ತಿ ಬೆಳೆಸಿಕೊಳ್ಳಬೇಕು
ಶಿವಮೊಗ್ಗ: ಯುವ ಜನತೆಯಲ್ಲಿ ದೇಶಭಕ್ತಿ ಬೆಳೆಸುವುದು, ದೇಶಕ್ಕಾಗಿ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಸ್ಕೌಟ್ ಮತ್ತು ಗೈಡ್ಸ್ ಹುಟ್ಟಿಕೊಂಡಿದ್ದು, ವಿದ್ಯಾರ್ಥಿಗಳು ದೇಶಭಕ್ತಿ ಬೆಳೆಸಿಕೊಂಡು ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸ್ಕೌಟ್ ಹಾಗೂ ಗೈಡ್ಸ್‌ನ ಜಿಲ್ಲಾ ಆಯುಕ್ತ ಎಚ್.ಡಿ. ಉಮೇಶ್ ಶಾಸ್ತ್ರಿ ಹೇಳಿದರು.
ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಮಲಾ ನೆಹರು ರೇಂಜರ್ ಟೀಂ 2013-14 ಒಂದು ದಿನದ ಕಾರ್ಯಾಗಾರದಲ್ಲಿ ಅವರು, ವಿದ್ಯಾರ್ಥಿಗಳಿಗೆ ತಮ್ಮ ಶಾಲಾ, ಕಾಲೇಜು ಜೀವನದಲ್ಲಿ ಶಿಕ್ಷಣ ಮಾತ್ರ ಕಲಿಯಲು ಸಾಧ್ಯ. ಆದರೆ, ಸ್ಕೌಟ್ ಹಾಗೂ ಗೈಡ್ಸ್‌ನಲ್ಲಿ ಜೀವನದಲ್ಲಿ ಶಿಸ್ತು ಹಾಗೂ ಮನೋಸ್ಥೈರ್ಯ, ಮೌಲ್ಯವನ್ನು ಬೆಳೆಸುತ್ತದೆ ಎಂದರು.
ಮಕ್ಕಳಿಗೆ ಜೀವನದಲ್ಲಿ ನಡೆ, ನುಡಿ, ಕಾರ್ಯವಿಧಾನದ ಮೇಲೆ ಸ್ಕೌಟ್ ಮತ್ತು ಗೈಡ್ಸ್ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಕುಲಸಚಿವ ವಾಸುದೇವ್, ಇಂದು ಕೆಲವರು ಪ್ರಚಾರಕ್ಕಾಗಿ ಸೇವೆ ಮಾಡುತ್ತಿದ್ದಾರೆ. ಅವರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಆದರೆ, ಸ್ಕೌಟ್ ಮತ್ತು ಗೈಡ್ಸ್ ಮುಖ್ಯ ಉದ್ದೇಶವೇ ಸೇವೆ ನೀಡುವುದಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಾಗಿ ಸ್ಕೌಟ್ ಮತ್ತು ಗೈಡ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ದೇಶಕ್ಕಾಗಿ ಸೇವೆ ಮಾಡಿದರೆ ಸಿಗುವ ನೆಮ್ಮದಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಹಾಗಾಗಿ ದೇಶಸೇವೆಗೆ ಪ್ರತಿಯೊಬ್ಬರು ಬದ್ಧರಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ, ಅರುಣಮಾಲಾ, ರುದ್ರಾಣಿ ಇದ್ದರು.
ಇಂದಿನಿಂದ ಪ್ರವಚನ
ಸಾಗರ: ಇಲ್ಲಿನ ಚಿನ್ಮಯ ಮಿಷನ್ ಶಾಖೆಯು ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ರಾಮಾಯಣ ಪ್ರವಚನವನ್ನು ಹಮ್ಮಿಕೊಂಡಿದೆ. ಪಟ್ಟಣದ ಅಗ್ರಹಾರದಲ್ಲಿರುವ ಚಿನ್ಮಯಶ್ರೀ ಸಭಾಂಗಣದಲ್ಲಿ ಪ್ರತಿದಿನ ಸಂಜೆ 6ಗಂಟೆಯಿಂದ ನಡೆಯುವ ಈ ಪ್ರವಚನ ಕಾರ್ಯಕ್ರಮವನ್ನು ಚಿನ್ಮಯ ಮಿಷನ್ ವಿಶ್ವಪ್ರಮುಖರಾದ ಸ್ವಾಮಿ ತೇಜೋಮಯಾನಂದಜೀ ನಡೆಸಿಕೊಡಲಿದ್ದಾರೆ.ಸೆ.1ರ ಭಾನುವಾರ ಬೆಳಗ್ಗೆ 10-30ರಿಂದ ಸ್ವಾಮಿ ತೇಜೋಮಯಾನಂದಜೀ ಅವರಿಂದ ವಿಶೇಷ ಸತ್ಸಂಗ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.