ಸರ್ಕಾರಿ ನೌಕರನ ಮೇಲೆ ಹಲ್ಲೆ; ಕ್ರಮಕ್ಕೆ ಆಗ್ರಹ
ಸಾಗರ: ತಾಲೂಕಿನ ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಕರ್ತವ್ಯದಲ್ಲಿದ್ದ ರಾಮಮೂರ್ತಿ ಎಂಬವರ ಮೇಲೆ ಹಲ್ಲೆ ನಡೆಸಿದ ಕುಮಾರ್ ಹೈತೂರು ಅವರನ್ನು ತಕ್ಷಣ ಬಂಧಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಕರ್ತವ್ಯನಿರತ ಸರ್ಕಾರಿ ನೌಕರರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಅದರಲ್ಲಿಯೂ ಆರೋಗ್ಯ ಇಲಾಖೆ ನೌಕರರ ಮೇಲೆ ಸಣ್ಣಪುಟ್ಟ ಕಾರಣಗಳಿಗಾಗಿ ಪದೇ ಪದೇ ಹಲ್ಲೆ ನಡೆಯುತ್ತಿದ್ದು, ನೌಕರರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯವಾಗುತ್ತಿದೆ ಎಂದರು.
ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಮೂರ್ತಿ ಎಂಬವರ ಮೇಲೆ ಹೈತೂರು ನಿವಾಸಿ ಕುಮಾರ್ ಎಂಬವರು ಏಕಾಏಕಿ ಹಲ್ಲೆ ನಡೆಸಿ, ಅಶ್ಲೀಲ ಪದಗಳಿಂದ ನಿಂದಿಸಿರುವ ಕ್ರಮ ಖಂಡನೀಯ.
ವೈದ್ಯರು ಬರೆದುಕೊಟ್ಟ ಚೀಟಿಯಲ್ಲಿರುವ ಪರೀಕ್ಷೆ ತಮ್ಮ ಲ್ಯಾಬಿನಲ್ಲಿ ಲಭ್ಯವಿಲ್ಲ ಎಂದು ರಾಮಮೂರ್ತಿಯವರು ಹೇಳಿದ್ದಕ್ಕೆ ಏಕಾಏಕಿ ಹಲ್ಲೆ ನಡೆಸಿ, ಅವಾಚ್ಯಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ತಕ್ಷಣ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಪರಮೇಶ್ವರಪ್ಪ, ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಆರೋಗ್ಯ ಇಲಾಖೆ ನೌಕರರ ಮೇಲೆ ನಿರಂತರ ದೌರ್ಜನ್ಯ ಹೆಚ್ಚುತ್ತಿದ್ದು, ಸರ್ಕಾರ ಕಾನೂನು ರೂಪಿಸಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ. ಅಚ್ಚುತ್, ಸಂಘದ ಅಧ್ಯಕ್ಷ ಬಿ.ಎಸ್. ಪ್ರಭಾಕರ್, ಕಾರ್ಯದರ್ಶಿ ವೈ. ಮೋಹನ್, ಡಾ. ಮಂಜುನಾಥ ಪ್ರಸಾದ್, ಡಾ. ರಾಜು, ಡಾ. ಸ್ಮಿತಾ, ಅರುಣಕುಮಾರ್, ಭಾರತಿ, ಗಜೇಂದ್ರ ಅಂಕೋಲೆಕರ್, ರಾಜು, ಎಂ. ಮೈಲಪ್ಪ, ಪಂಡಿತಾರಾಧ್ಯ, ಜಿ.ಬಸವರಾಜ್, ಡಿ. ಗಣಪತಪ್ಪ, ಲತಾದೇವಿ ಇದ್ದರು.