ದನದ ಮಾಂಸ ಮಾರಾಟ: ಮೂವರ ಬಂಧನ
ಸಾಗರ: ತಾಲೂಕಿನ ಆಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳೂರಿನಲ್ಲಿ ಶುಕ್ರವಾರ ದನದ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಹಳ್ಳೂರಿನ ಅಯೂಬ್ ಖಾನ್ ಅಮೀರ್ ಬೇಗ್ ಎಂಬುವವರ ಮನೆಯಲ್ಲಿ ದನವನ್ನು ಕಡಿದು, ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಅಮೀರ್ ಬೇಗ್, ಅಸ್ಲಾಂ ಎಂಬುವವರನ್ನು ಬಂಧಿಸಿ ಸುಮಾರು 35 ಕೆ.ಜಿ. ದನದ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ದೇವರಾಜ್, ದಫೇದರ್ ಹಾಲೇಶ್ ರಾಜ್ ಅರಸು, ಸಿಬ್ಬಂದಿಗಳಾದ ಜಯೇಂದ್ರ, ಮಹಾಂತೇಶ್, ಸಂತೋಷ ನಾಯಕ್, ಹಜರತಾಲಿ, ರಾಘವೇಂದ್ರ ಹಾಗೂ ಸಂದೀಪ್ ಪಾಲ್ಗೊಂಡಿದ್ದರು.
ಪೊಲೀಸರ ವಶಕ್ಕೆ ತಾಬೀದ್
ಶಿವಮೊಗ್ಗ: ಕೋಮು ಸಾಮರಸ್ಯ ಕದಡುವ ಕೈಬರಹದ ಕರಪತ್ರವನ್ನು ಹಂಚಿ ಪ್ರತಿಭಟನೆಗೆ ಕಾರಣವಾಗಿದ್ದ ತಾಬೀದ್ ಎಂಬಾತನನ್ನು ಕುಂಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೌಸ್ ಎಂಬುವರ ಮೇಲಿನ ವೈಯಕ್ತಿಕ ದ್ವೇಷದಿಂದ ಈತ ಅವರ ಹೆಸರಿನಲ್ಲಿ ಗಣಪತಿ ಹಬ್ಬದ ವೇಳೆ ಬಾಂಬ್ ಹಾಕುವುದಾಗಿ ಬೆದರಿಸಿ ಪತ್ರ ಬರೆದಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಗೌಸ್ ಅವರೊಂದಿಗೆ ವೈಯಕ್ತಿಕ ದ್ವೇಷ ಹೊಂದಿದ್ದ ತಾಬೀದ್ ಈ ಕೃತ್ಯ ಮಾಡಿರುವ ಶಂಕೆ ವ್ಯಕ್ತಪಡಿಸಿದರು. ವಶಕ್ಕೆ ಪಡೆದಾಗ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶನಿವಾರ ಈತನನ್ನು ನ್ಯಾಯಾಲಯದ ಎದುರು ಹಾಜರು ಮಾಡುವ ನಿರೀಕ್ಷೆ ಇದೆ.
ಪ್ರತಿಭಟನೆ ಎಚ್ಚರಿಕೆ
ಸೊರಬ: ಸರ್ಕಾರಿ ನೌಕರರ ಮೇಲೆ ನಡೆಸುತ್ತಿರುವ ಕಿರುಕುಳ ಹೆಚ್ಚಾಗಿದ್ದು, ಸಂಘದ ವತಿಯಿಂದ ತೀವ್ರ ಖಂಡಿಸುತ್ತೇವೆ ಎಂದು ತಾಲೂಕು ನೌಕರರ ಸಂಘ ಆಗ್ರಹಿಸಿದೆ. 29ರಂದು ರಂದು ಆನವಟ್ಟಿ ಗ್ರಾಪಂ ಎದುರು ನಡೆದ ಧರಣಿ ವೇಳೆ ಕಾರ್ಯ ನಿರ್ವಹಣಾಧಿಕಾರಿ ಭೇಟಿ ನೀಡಿದಾಗ ಕೆಲ ಸದಸ್ಯರು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ನೌಕರರಿಗೆ ಕೆಲಸ ನಿರ್ವವಹಿಸಲು ಸರ್ಕಾರ ರಕ್ಷಣೆ ನೀಡುವುದೆ ಎಂದು ಸಂಘ ಆಗ್ರಹಿಸಿದೆ.