ಶಿವಮೊಗ್ಗ ಪಶುವೈದ್ಯ ವಿದ್ಯಾರ್ಥಿಗಳ ಸ್ಥಿತಿ ಅತಂತ್ರ
ಶಿವಮೊಗ್ಗ: ಇದೂವರೆಗೆ ರಾಜ್ಯದಲ್ಲಿ ಪಶುವೈದ್ಯ ಪದವಿ ಪಡೆದರೂ ಕರ್ನಾಟಕ ಪಶುವೈದ್ಯ ಪರಿಷತ್ತಿನ ನೋಂದಣಿ ಸಂಖ್ಯೆ ಪಡೆಯದ ಪಶುವೈದ್ಯಕೀಯ ಶಿಕ್ಷಣ ಪದವೀಧರರ ಸಂಖ್ಯೆ 72 ಆಗಿದೆ. ಈ ಮೊತ್ತಕ್ಕೆ ಹೊಸದಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 79 ಮಂದಿ ಸೇರಲಿದ್ದಾರೆ.
ಏಕೆಂದರೆ ರಾಜ್ಯ ಸರ್ಕಾರವಾಗಲಿ, ಪಶುವೈದ್ಯಕೀಯ ವಿಶ್ವವಿದ್ಯಾಲಯವಾಗಲಿ ಶಿವಮೊಗ್ಗ ಹಾಗೂ ಹಾಸನದಲ್ಲಿರುವ ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸುವ ವಿಷಯವನ್ನು ಸಂಪೂರ್ಣ ಕೈಬಿಟ್ಟಿದೆ. ಇದೇ ಸೆ.4ರಂದು ಈ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಶಿಕ್ಷಣ ಮುಗಿಯಲಿದ್ದು, ಇಂಟರ್ನ್ಶಿಪ್ ಮಾತ್ರ ಬಾಕಿ ಉಳಿಯಲಿದೆ. ಹಾಲಿ ಅಂತಿಮ ವರ್ಷದಲ್ಲಿ ಶಿವಮೊಗ್ಗದಲ್ಲಿ 39, ಹಾಸನದಲ್ಲಿ 40 ವಿದ್ಯಾರ್ಥಿಗಳಿದ್ದಾರೆ. ಈಗಾಗಲೇ ಕರ್ನಾಟಕ ಪಶುವೈದ್ಯ ಪರಿಷತ್ತು ಶಿವಮೊಗ್ಗ ಕಾಲೇಜಿನಿಂದ ಶಿಕ್ಷಣ ಪಡೆದು ಹೊರಬಂದಿರುವ 19 ವಿದ್ಯಾರ್ಥಿಗಳಿಗೆ ನೀಡಿದ್ದ ನೋಂದಣಿ ಸಂಖ್ಯೆಯನ್ನು ವಾಪಸು ಪಡೆದಿದ್ದು, ಈಗ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ಮಾನ್ಯತೆ ಸಿಕ್ಕಿಲ್ಲ: ರಾಜ್ಯದಲ್ಲಿರುವುದು ನಾಲ್ಕು ಪಶುವೈದ್ಯ ಕಾಲೇಜು. ಅದರಲ್ಲಿ ಬೆಂಗಳೂರಿನ ಕಾಲೇಜು ಹೊರತುಪಡಿಸಿ ಕರ್ನಾಟಕ ಪಶು ವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೇಂದ್ರವಾಗಿರುವ ಬೀದರ್ನಲ್ಲಿರುವ ಕಾಲೇಜಿಗೂ ಸಹ ಭಾರತೀಯ ಪಶುವೈದ್ಯ ಪರಿಷತ್ತಿನ ಮಾನ್ಯತೆ ಸಿಕ್ಕಿಲ್ಲ. ಈ ಪಟ್ಟಿಗೆ ಶಿವಮೊಗ್ಗ ಹಾಗೂ ಹಾಸನದಲ್ಲಿರುವ ಪಶುವೈದ್ಯ ಕಾಲೇಜುಗಳೂ ಸೇರಿವೆ.
ಶಿವಮೊಗ್ಗ ಪಶುವೈದ್ಯ ಕಾಲೇಜಿನಲ್ಲಿ ಈ ವರ್ಷ ಮೂರನೇ ಬ್ಯಾಚ್ ಪದವಿ ಶಿಕ್ಷಣ ಮುಗಿಸಿ ಹೊರಬರುತ್ತಿದೆ. ಏಳು ವರ್ಷಗಳಾದರೂ ಸಹ ಈ ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸಲು ಆಗಿಲ್ಲ.
ತಪ್ಪು ಯಾರದು: ಶಿವಮೊಗ್ಗ ಪಶುವೈದ್ಯ ಕಾಲೇಜಿಗೆ ಬೇಕಾದ ಜಾಗ ಯಾವತ್ತೋ ವಿಶ್ವವಿದ್ಯಾಲಯಕ್ಕೆ ಸಿಕ್ಕಿದೆ. ಸರ್ಕಾರವೂ ಸಹ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಆಗಬೇಕಾದ ಕೆಲಸಗಳನ್ನು ನಿರ್ವಹಿಸುವಲ್ಲಿ ವಿಶ್ವವಿದ್ಯಾಲಯ ವಿಫಲವಾಗಿದೆ ಎಂದು ಮೇಲ್ನೋಟಕ್ಕೆ ಕಾಣತ್ತಿದೆ.
2011-12ನೇ ಸಾಲಿನ ವರೆಗೆ ರಾಜ್ಯ ಸರ್ಕಾರದಿಂದ 70.81 ಕೋಟಿ ರು. ಬಿಡುಗಡೆಯಾಗಿದೆ. ಖರ್ಚಾದರೆ ಇನ್ನಷ್ಟು ಹಣ ಬಿಡುಗಡೆಗೆ ಸಿದ್ಧವಿತ್ತು. ಆದರೆ ಆರಂಭದಿಂದಲೂ ಕಾಮಗಾರಿ ಬಾಲಗ್ರಹಪೀಡಿತವಾಗಿದೆ.
ಭೂಸ್ವಾದೀನವಾಗುತ್ತಿದ್ದಂತೆ ಕಾಮಗಾರಿಯನ್ನು ಯಾರು ನಿರ್ವಹಿಸುವುದೆಂದು ತೀವ್ರ ಚರ್ಚೆ ಎದ್ದಿತ್ತು. ಆಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಲೋಕೋಪಯೋಗಿ ಇಲಾಖೆ ಈ ಕಾರ್ಯ ನಡೆಸಲಿ ಎಂದು ಹೇಳಿದರೆ ನಮ್ಮ ಎಂಜಿನಿಯರಿಂಗ್ ವಿಭಾಗವೇ ಕೈಗೊಳ್ಳಲಿ ಎಂಬುದು ವಿವಿ ನಿಲುವಾಗಿತ್ತು. ಕೊನೆಗೆ ಲೋಕೋಪಯೋಗಿ ಇಲಾಖೆಯೇ ಕಾಲೇಜು ಕಟ್ಟಡ ನಿರ್ಮಿಸುವ ಜವಾಬ್ದಾರಿ ಹೊತ್ತಿತ್ತು. ಆದರೆ, ಈ ಕಟ್ಟಡವನ್ನು ಹಸ್ತಾಂತರಿಸಲು ಸಾಕಷ್ಟು ತಡ ಮಾಡಿದೆ ಎಂಬುದೇ ವಿಸಿಐ ಮುಖ್ಯ ಆಕ್ಷೇಪಣೆಯಾಗಿದೆ. ಇನ್ನು ಕೊರತೆ ಇರುವ ಉಪನ್ಯಾಸಕರು ಹಾಗೂ ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ. ಸಾಕಷ್ಟು ಬ್ಯಾಕ್ಲಾಗ್ ಉದ್ದೆಗಳ ನೇಮಕ ಆಗಿಲ್ಲ.
ನಿರ್ಬಂಧ: ವಿಸಿಐ ಮಾನ್ಯತೆ ಸಿಗುವರೆಗೂ ವಿಶ್ವವಿದ್ಯಾಲಯ ಯಾವತ್ತೂ ಕಾಯಲಿಲ್ಲ. ವಿದ್ಯಾರ್ಥಿಗಳಿಗೆ ಪ್ರವೇಶ ಆಹ್ವಾನಿಸಿದಾಗ ಜಾಹಿರಾತಿನಲ್ಲಿ ಯಾವತ್ತೂ ಮಾನ್ಯತೆ ದೊರೆಯದಿರುವ ವಿಷಯ ಮಂಡಿಸಲಿಲ್ಲ. ಪ್ರವೇಶ ನೀಡುತ್ತಲೇ ಹೋಯಿತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಮೂಲಕ ಈ ಕಾಲೇಜುಗಳಿಗೆ ಪ್ರವೇಶ ನೀಡಲು ಮುಂದಾಯಿತೋ ಆಗ ಸಮಸ್ಯೆ ಆರಂಭವಾಯಿತು.
ಭಾರತೀಯ ಪಶುವೈದ್ಯ ಪರಿಷತ್ತಿನ ಮಾನ್ಯತೆ ದೊರೆಯದಿದ್ದರೂ ಸಹ ವಿದ್ಯಾರ್ಥಿಗಳಿಗೆ ಪ್ರವೇಶ ನೀಡವುದನ್ನು ಮುಂದುವರಿಸಿದ್ದ ವಿಶ್ವವಿದ್ಯಾಲಯವು ಮತ್ತೆಮತ್ತೆ ಅವರನ್ನು ಆತಂಕಕ್ಕೆ ತಳ್ಳುತ್ತಿತ್ತು. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾನ್ಯತೆ ಪಡೆಯದ ಕಾಲೇಜುಗಳನ್ನು ಸೀಟ್ ಮ್ಯಾಟ್ರಿಕ್ಸ್ನಲ್ಲಿ ಅಳವಡಿಸಲು ನಿರಾಕರಿಸಿತು.
ಪ್ರಯತ್ನ ವಿಫಲ
ಈ ಬಗ್ಗೆ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಅವರು ಹಲವು ಬಾರಿ ದೆಹಲಿ ಪ್ರವಾಸ ಮಾಡಿ ಭಾರತೀಯ ಪಶುವೈದ್ಯ ಪರಿಷತ್ತಿನ ಮಾನ್ಯತೆ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ ವಿಸಿಐ ಪ್ರತಿನಿಧಿಗಳು ಭೇಟಿ ನೀಡಿ ಆಗಬೇಕಾಗಿರುವ ಕೆಲಸಗಳ ಪಟ್ಟಿಯನ್ನು ನೀಡಿ 8-10 ತಿಂಗಳಾದರೂ ಸಹ ಏನೂ ಪ್ರಗತಿಯಾಗದ ಕಾರಣ ಮಾನ್ಯತೆ ನೀಡಲು ಒಪ್ಪಿಲ್ಲ.