ಸೆ.30ರೊಳಗೆ ಎಲ್ಲ ಸಂತ್ರಸ್ತರಿಗೂ ಪರಿಹಾರ
ಶಿವಮೊಗ್ಗ: ಶೇ.50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರುವ ಎಲ್ಲಾ ಸಂತ್ರಸ್ಥರಿಗೂ ಸೆ.30ರೊಳಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ತಿಳಿಸಿದ್ದಾರೆ.
ಬೆಳೆಹಾನಿ ಕುರಿತಂತೆ ಈಗಾಗಲೆ ಅರ್ಜಿ ಸಲ್ಲಿಸಿರುವ ಎಲ್ಲಾ ಸಂತ್ರಸ್ಥರಿಗೂ ಹಿಡುವಳಿ ಅನುಸಾರ ಪರಿಹಾರ ಒದಗಿಸಲಾಗುವುದು. ಅರ್ಜಿ ಸಲ್ಲಿಸದೇ ಸರ್ವೇ ಸಂದರ್ಭದಲ್ಲಿ ಕಂಡುಬಂದ ಬೆಳೆಹಾನಿಯಾದ ಸಂತ್ರಸ್ಥರಿಗೂ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಅವರು, ಜಿಲ್ಲಾದ್ಯಂತ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಯುತ್ತಿದೆ. ಈಗಾಗಲೆ ಕೃಷಿ ಬೆಳೆ ಹಾನಿ ಕುರಿತು ಸಮೀಕ್ಷೆ ಪೂರ್ಣಗೊಂಡಿದ್ದು, ತೋಟಗಾರಿಕೆ ಬೆಳೆಗಳ ಹಾನಿ ಕುರಿತ ಅಧ್ಯಯನ ಮುಂದುವರಿದಿದೆ. ಸೆ.30ರೊಳಗೆ ಬೆಳೆಹಾನಿಗೊಳಗಾದ ಎಲ್ಲಾ ಸಂತ್ರಸ್ಥರಿಗೂ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ಅಡಕೆ ತೋಟಗಳು, ಕೊಳೆರೋಗ ಬಾಧಿತವಾಗಿದ್ದು, ಸಾಗರ, ತೀರ್ಥಹಳ್ಳಿ ಮತ್ತು ಸೊರಬ ತಾಲೂಕುಗಳಲ್ಲಿ ಹೆಚ್ಚು ನಷ್ಟ ಸಂಭವಿಸಿರುವ ಬಗ್ಗೆ ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಸಮೀಕ್ಷೆ ಕಾರ್ಯ ಮುಗಿದ ನಂತರವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಕೃತಿ ವಿಕೋಪ ಪರಿಹಾರ ನಿಧಿಯ ನಿಯಮಾನುಸಾರ ಮಾರ್ಗಸೂಚಿಯಂತೆ ನಷ್ಟ ಪರಿಹಾರಗಳನ್ನು ತುಂಬಿಕೊಡಲಾಗುವುದು. ಅತಿ ಸಣ್ಣ ರೈತ, ಸಣ್ಣ ರೈತ ಹಾಗೂ ಮಧ್ಯಮ ಎಂಬ ಮೂರು ವರ್ಗಗಳಂತೆ ಪರಿಹಾರ ವಿತರಿಸಲಾಗುತ್ತದೆ. ಎರಡು ಹೆಕ್ಟೇರ್‌ಗಿಂತ ಕಡಿಮೆ ಇರುವ ಅಡಕೆ ತೋಟಗಳ ಹಿಡುವಳಿದಾರರಿಗೆ 12,000 ರು.ಗಳ, ಅದರಲ್ಲೂ ಶೇ.50ಕ್ಕಿಂತ ಹೆಚ್ಚಿನ ನಷ್ಟ ಆಗಿರುವ ಬೆಳೆಗಾರರಿಗೆ ಗರಿಷ್ಠ 24,000 ರು.ವರೆಗೆ ಪರಿಹಾರ ವಿತರಿಸಲಾಗುವುದು ಎಂದರು.
ಸೆ.15ರೊಳಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಮುಗಿಸುವ ಉದ್ಧೇಶ ಜಿಲ್ಲಾಡಳಿತದ್ದಾಗಿತ್ತು. ಆದರೆ ತೋಟಗಾರಿಕೆ ಇಲಾಖೆ ಬೆಳೆಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಸೆ.30ರೊಳಗೆ ಪರಿಹಾರ ಒದಗಿಸುವ ಗುರಿ ಹೊಂದಲಾಗಿದೆ. ಕೃಷಿ ಬೆಳೆ ಹಾನಿ ಪರಿಹಾರ ವಿತರಣೆ ಕಾರ್ಯ ಈಗಾಗಲೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.