ನಾಳೆ ಶಿವಮೊಗ್ಗಕ್ಕೆ ಎಚ್ಡಿಕೆ
ಶಿವಮೊಗ್ಗ: ಜಾತ್ಯತೀತ ಜನತಾದಳ ಜಿಲ್ಲಾ ಘಟಕದ ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರ ಸಭೆಯನ್ನು ಸೆ.2ರಂದು ನಗರದ ಜೈಲ್ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಈ ಸಮಾವೇಶದಲ್ಲಿ ಅವರು ಪಕ್ಷದ ಸಂಘಟನೆ ಮತ್ತು ಮುಂಬರುವ ಲೋಕಸಭಾ ಚುನಾವಣೆ ಬಗ್ಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಜೆ. ಅಪ್ಪಾಜಿಗೌಡ, ಶಾರದಾ ಪೂರ್ಯಾನಾಯ್ಕ್, ಮಧು ಬಂಗಾರಪ್ಪ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್ ವಹಿಸಲಿದ್ದಾರೆ.
ಇಂದು ತಾಲೂಕು ಮಟ್ಟದ ಚೆಸ್ ಸ್ಪರ್ಧೆ
ಸಾಗರ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಾಗರ ತಾ. ಚೆಸ್ ಅಸೋಸಿಯೇಶನ್ ಸಂಸ್ಥೆಯ ಉದ್ಘಾಟನೆ ಮತ್ತು ತಾಲೂಕು ಮಟ್ಟದ ಬಾಲಕ/ ಬಾಲಕಿಯರಿಗೆ ಚೆಸ್ ಸ್ಪರ್ಧೆಯನ್ನು ಸೆ.1ರಂದು ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ತಾಲೂಕಿನವರೇ ಆದ ಅಂತಾರಾಷ್ಟ್ರೀಯ ಮಾಸ್ಟರ್ ಬಿ.ಎಸ್. ಶಿವಾನಂದ ಉದ್ಘಾಟಿಸಲಿದ್ದಾರೆ. ತಾಲೂಕಿನ 17 ವರ್ಷದ ಒಳಗಿನ ಬಾಲಕ/ಬಾಲಕಿಯರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ವಿಜೇತ ಮೊದಲ ಐವರಿಗೆ ಪಾರಿತೋಷಕ ಮತ್ತು ನಗದು ಬಹುಮಾನ ಹಾಗೂ ಸಮಾಧಾನಕರ ಬಹುಮಾನ ಮತ್ತು ಪಾಲ್ಗೊಂಡ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ವಿವರಗಳಿಗೆ ಹುಚ್ಚರಾಯಪ್ಪ-944772567 ಅಥವಾ ಸುರೇಶ-9481405091 ಸಂಪರ್ಕಿಸಬಹುದಾಗಿದೆ.
ಧರ್ಮ, ವೈಚಾರಿಕತೆ: ಸಂವಾದ ಕಾರ್ಯಕ್ರಮ
ಭದ್ರಾವತಿ: ಭೂಮಿಕಾ ವೇದಿಕೆಯಿಂದ ಭಾನುವಾರ ಸಂಜೆ 6.30ಕ್ಕೆ ಧರ್ಮ ಮತ್ತು ವೈಚಾರಿಕತೆ ಎಂಬ ವಿಷಯ ಕುರಿತ ವೈಚಾರಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಪಟ್ಟಣದ ತರೀಕೆರೆ ರಸ್ತೆಯಲ್ಲಿರುವ ನಯನ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಲಿದ್ದು ಹುಲಿಕಲ್ ನಟರಾಜ್ ಪವಾಡ ಬಯಲು ಕಾರ್ಯಕ್ರಮದ ಪ್ರದರ್ಶನ ನೀಡಲಿರುವರು. ಭೂಮಿಕಾ ವೇದಿಕೆಯ ಅಧ್ಯಕ್ಷ ಡಾ. ಕೃಷ್ಣ ಎಸ್.ಭಟ್ ಅಧ್ಯಕ್ಷತೆ ವಹಿಸುವರು.