'ಪ್ರತಿಯೊಬ್ಬರೂ ಆರ್ಥಿಕ ಸಾಕ್ಷರತೆ ತಿಳಿಯಿರಿ'
ಕ.ಪ್ರ. ವಾರ್ತೆ ಶಿವಮೊಗ್ಗ ಆ.31
ಆರ್ಥಿಕ ಸಾಕ್ಷರತೆ ಇಲ್ಲದ ಕಾರಣ ಬ್ಯಾಂಕಿಂಗ್ ಚಟುವಟಿಕೆಗಳಿಂದ ಬಹುತೇಕರು ಹೊರಗುಳಿದಿದ್ದಾರೆ. ಇಂತಹ ಕೊರತೆ ನೀಗಿಸುವುದಕ್ಕಾಗಿಯೇ ಆರ್ಥಿಕ ಸಾಕ್ಷರತಾ ಕೇಂದ್ರ ಸ್ಥಾಪನೆಯಾಗಿದೆ.
ಎಲ್ಲರೂ ಇದರ ಪ್ರಯೋಜನ ಪಡೆದು ಮುಂದೆ ಬರಬೇಕು ಎಂದು ನಬಾರ್ಡ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಜಿ.ಆರ್. ಚಿಂತಾಲ ಹೇಳಿದರು.
ಶನಿವಾರ ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್ ಮತ್ತು ನಬಾರ್ಡ್ ಪ್ರಾಂತೀಯ ಕಚೇರಿ ಸಹಯೋಗದಲ್ಲಿ ಆರಂಭಿಸಿರುವ ಆರ್ಥಿಕ ಸಾಕ್ಷರತಾ ಕೇಂದ್ರ ಉದ್ಘಾಟಿಸಿದ ಅವರು, ಹಣಕಾಸು ವಿಷಯಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಇಲ್ಲದಿರುವುದರಿಂದಲೇ ಇಂದು ಹೆಚ್ಚು ಮೋಸಕ್ಕೊಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಆಯಾ ಕ್ಷೇತ್ರಗಳಲ್ಲಿ ಜ್ಞಾನ ಸಂಪಾದಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಆಯಾ ಕ್ಷೇತ್ರಗಳಲ್ಲಿ ಅನಕ್ಷರಸ್ಥರಾಗಿಯೇ ಉಳಿಯುವಂತಾಗುತ್ತದೆ.
ಇಂದಿನ ಕಂಪ್ಯೂಟರ್ ಯುಗದಲ್ಲಿ ಈ ಬಗ್ಗೆ ಕನಿಷ್ಠ ಸಾಕ್ಷರತೆ ಪಡೆದುಕೊಳ್ಳದಿದ್ದರೆ ಆ ಕ್ಷೇತ್ರದಲ್ಲಿ ಅನಕ್ಷರಸ್ಥರಾಗುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ನಮ್ಮ ದೇಶ ಕೃಷಿ ಪ್ರಧಾನ ದೇಶ.
ಈ ಕಾರಣದಿಂದಲೇ ಇಡೀ ಪ್ರಪಂಚ ಹಣದುಬ್ಬರದಿಂದ ತತ್ತರಿಸಿದಾಗ ಭಾರತದ ಆರ್ಥಿಕ ಪರಿಸ್ಥಿತಿ ಮಾತ್ರ ಮಾಮೂಲಿಯಂತಿತ್ತು. ದೇಶದ ಜನರು ಉಳಿತಾಯ ಮನೋಭಾವ ಹೊಂದಿರುವುದೇ ಇದಕ್ಕೆ ಕಾರಣ ಎಂದರು.
ವೇದಿಕೆಯಲ್ಲಿ ನಬಾರ್ಡ್ನ ರಾಘವೇಂದ್ರ, ರಮೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಸಿ. ಪಾಟೀಲ್, ಸಹಕಾರ ಸಂಘಗಳ ಉಪನಿಬಂಧಕ ಸಂತೋಷ್ ಕುಮಾರ್, ಸಹಕಾರಿಗಳಾದ ಸರಸ್ವತಿ ನಾಗರಾಜ್, ಅಶೋಕ್ ಕುಮಾರ್, ವಿದ್ಯಾಧರ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಾಗಭೂಷಣ್ ಇದ್ದರು.