ರಕ್ತದಾನಕ್ಕೆ ಪ್ರೇರೇಪಿಸಿ: ಮೋಹನ್ಅಭಿಮತ
ಸಾಗರ: ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವವನ್ನು ತಿಳಿಸುವ ಜೊತೆಗೆ ಅವರಲ್ಲಿ ರಕ್ತದಾನಕ್ಕೆ ಪ್ರೇರೇಪಿಸುವ ಕೆಲಸ ಆಗಬೇಕು ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮೋಹನ್ ಕೆ. ಶೇಟ್ ಹೇಳಿದರು.
ಇಲ್ಲಿನ ದೈವಜ್ಞ ಯುವಕ ಸಂಘ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರಲ್ಲಿ ರಕ್ತದಾನ ಮಾಡಿದರೆ ಆರೋಗ್ಯ ಹಾಳಾಗುತ್ತದೆ ಎನ್ನುವ ತಪ್ಪು ಕಲ್ಪನೆ ಇರುವುದರಿಂದ ರಕ್ತದಾನಕ್ಕೆ ಹಿಂಜರಿಯುತ್ತಿದ್ದಾರೆ. ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ವಿಜ್ಞಾನ ಸಾಬೀತುಪಡಿಸಿದೆ.
ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಹಲವರ ಜೀವ ಉಳಿಸಲು ಸಾಧ್ಯವಾಗುತ್ತದೆ. ಯುವ ಸಂಘಟನೆಗಳು ಇತರೆ ಕಾರ್ಯಕ್ರಮಗಳನ್ನು ಮಾಡುವುದಕ್ಕಿಂತ ರಕ್ತದಾನದಂತಹ ಕಾರ್ಯಕ್ರಮ ಆಯೋಜಿಸುವುದು ಸ್ವಾಗತಾರ್ಹ ಎಂದರು.
ಶಿಬಿರಗಳ ಅಗತ್ಯವಿದೆ: ನಗರಸಭೆ ಸದಸ್ಯ ಅರವಿಂದ ರಾಯ್ಕರ್ ಮಾತನಾಡಿ, ನಾವು ದಾನ ಮಾಡುವ ರಕ್ತ ಯಾರಿಗೆ ಹೋಗುತ್ತದೆ ಎಂದು ತಿಳಿಯುವುದಿಲ್ಲ. ಆದರೂ ಮತ್ತೊಬ್ಬರಿಗೆ ನಮ್ಮ ರಕ್ತದಿಂದ ಪ್ರಾಣ ಉಳಿಯಿತಲ್ಲ ಎನ್ನುವ ಆತ್ಮಸಂತೋಷ ನಮಗೆ ಸಿಗುತ್ತದೆ. ರಕ್ತದಾನಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳ ಅಗತ್ಯತೆ ಹೆಚ್ಚು ಇದೆ ಎಂದು ಹೇಳಿದರು.
ದೈವಜ್ಞ ಯುವಕ ಸಂಘದ ಅಧ್ಯಕ್ಷ ಕೆ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ರೋಟರಿ ರಕ್ತನಿಧಿ ಕೇಂದ್ರದ ಡಾ.ಕೆ.ಎಸ್. ಭಾಸ್ಕರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸತೀಶ್ ಎಸ್.ಕೆ. ಹಾಜರಿದ್ದರು. ರಾಘವೇಂದ್ರ ಕೆ. ಶೇಟ್ ಸ್ವಾಗತಿಸಿದರು. ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಎಸ್.ಎಲ್. ವಂದಿಸಿದರು. ಎಂ.ಎಸ್. ಪ್ರಶಾಂತ ನಿರೂಪಿಸಿದರು.