ಸಮಾಜ ಒಡೆಯುತ್ತಿರುವ ಸ್ವಾಮೀಜಿಗಳು
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.1
ಪ್ರಸ್ತುತ ಕೆಲ ಸ್ವಾಮೀಜಿಗಳು ಜಾತಿ, ಉಪಜಾತಿಗಳನ್ನು ಒಳಗೊಳಗೆ ಎತ್ತಿಕಟ್ಟಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸ್ವಾಮೀಜಿಗಳನ್ನು ಜನ ಒಪ್ಪಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ ಹಾಗೂ ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕನಕ ದಾಸರ ಜಯಂತಿ ಅಂಗವಾಗಿ ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಜಾತಿ ಮೀರಿದ ಸಮಾಜ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ, ಇಂದು ಅದೇ ಸಮಾಜದಲ್ಲಿ ಸರ್ವಸಂಗ ಪರಿತ್ಯಾಗ ಮಾಡಿದ ಕೆಲ ಸ್ವಾಮೀಜಿಗಳು ಹಾಗೂ ಸಾಧುಸಂತರೇ ಪೈಪೋಟಿಗೆ ಬಿದ್ದಂತೆ ಒಳಗೊಳಗೆ ಜಾತಿ, ಉಪಜಾತಿಗಳಿಗೆ ಪ್ರಾಮುಖ್ಯ ನೀಡುತ್ತಾ ಬೆಂಬಲಿಸತೊಡಗಿದ್ದಾರೆ. ಇದರಿಂದ ಸಮಾಜದಲ್ಲಿ ಜಾತಿ, ಉಪಜಾತಿಗಳ ನಡುವೆ ಭೇದಭಾವ ಉಂಟಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಲ ಕುಲ ಎಂದು ಹೊಡೆದಾಡಬೇಡಿ ಎಂದು ಕನಕದಾಸರು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಿದ್ದಾರೆ. ದಾಸರ ಈ ವಿಚಾರಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರಪಂಚದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗುತ್ತದೆ. ಕಾಲುಕೆರೆದುಕೊಂಡು ಜಗಳಕ್ಕೆ ಬರುವ ನೆರೆಯ ರಾಷ್ಟ್ರಗಳಿಗೆ ತಕ್ಕ ಉತ್ತರ ನೀಡಬಹುದು. ಆದರೆ, ದೇಶದಲ್ಲಿ ಜಾತಿ- ಜಾತಿಗಳ ನಡುವೆ ಸಾಮರಸ್ಯವಿಲ್ಲದಂತಾಗಿದೆ ಎಂದು ವಿಷಾದಿಸಿದರು.
ತತ್ವಾದರ್ಶ ಪಾಲಿಸಿ: ಶಂಕರಾಚಾರ್ಯ, ಬಸವಣ್ಣ, ಭಕ್ತ ಕನಕದಾಸರು, ನಾರಾಯಣಗುರುಗಳು ಹೀಗೆ ಪ್ರತಿಯೊಬ್ಬ ದಾರ್ಶನಿಕರು ಸಮಾಜವನ್ನು ಒಂದು ಗೂಡಿಸಲು ತಮ್ಮ ಜೀವನವನ್ನೇ ಮೀಸಲಿಟ್ಟಿದ್ದಾರೆ. ಆದರೆ, ಇಂತಹ ಮಾಹಾನ್ ದಾರ್ಶನಿಕರ ಹೆಸರನ್ನು ಹೇಳಿಕೊಳ್ಳುವ ಅವರ ಕೆಲ ಅನುಯಾಯಿಗಳು, ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ಭಾಷಣದಲ್ಲಿ ಹೇಳುವ ಸ್ವಾಮೀಜಿಗಳು ಜಾತಿ, ಉಪಜಾತಿಗಳಿಗೆ ಮಣೆಹಾಕುತ್ತಾ ಸಮಾಜವನ್ನು ತಪ್ಪದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿದರು.
ಆರೋಪ ಪ್ರತ್ಯಾರೋಪ ಸರಿಯಲ್ಲ: ಜಾತಿ ಜಾತಿಗಳ ಮಧ್ಯೆ ಸಾಮರಸ್ಯ ಏರ್ಪಡಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ಇದಕ್ಕಾಗಿ ದಾರ್ಶನಿಕರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಛಿದ್ರ ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಸಾರ್ವಜನಿಕರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಸಾಧುಸಂತರು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಾ ನಗೆಪಾಟಲಿಗೆ ಗುರಿಯಾಗುತ್ತಿರುವುದನ್ನು ಮಾದ್ಯಮಗಳಲ್ಲಿ ಪ್ರತಿನಿತ್ಯ ನೋಡುತ್ತಿದ್ದೇವೆ. ಅಡ್ಡಪಲ್ಲಕಿ ಉತ್ಸವ ಬೇಕೋ ಬೇಡವೋ, ಉಡುಪಿಯಲ್ಲಿರುವ ದೇವರು ಕೃಷ್ಣನೋ, ಸುಬ್ರಹ್ಮಣ್ಯನೋ ಎಂಬ ವಿಚಾರ ಕುರಿತಾಗಿ ಸಾಕಷ್ಟು ಚರ್ಚೆಯಾಗುತ್ತಿರುವುದು ವಿಪರ್ಯಾಸ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ, ಬಸವ ಕೇಂದ್ರ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವುಲೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪತಂಜಲಿ ನಾಗರಾಜ್, ಡಾ. ಎನ್.ಎಲ್. ನಾಯಕ್, ಕೆ. ದೇವೇಂದ್ರಪ್ಪ, ಸುಂದರರಾಜ್ ಮತ್ತಿತರರು ಇದ್ದರು.