ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಧ್ಯಾತ್ಮದಿಂದ ನೈತಿಕತೆ ಉಳಿವು

Lingaraj Badiger
Updated On : 3 Dec 2013, 10:40 am

ಕ.ಪ್ರ. ವಾರ್ತೆ, ಸಾಗರ, ಡಿ.2
ನೈತಿಕತೆ ಬೆಳೆಯಬೇಕಾದರೆ ಅದು ಆಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದು ಸೋಂದಾ ಸ್ವರ್ಣ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಶ್ರೀ ಹೇಳಿದರು.
ಶಂಕರ ಮಠದ ಭಾರತಿ ತೀರ್ಥ ಸಭಾ ಭವನದಲ್ಲಿ ಭಾನುವಾರ ಸೋಂದಾ ಸ್ವರ್ಣವಲ್ಲಿ ಮಠ ಹಾಗೂ ಶ್ರೀ ಮದ್ಭಗವದ್ಗೀತಾ ಅಭಿಯಾನ ಸಮಿತಿ ಹಮ್ಮಿಕೊಂಡಿದ್ದ ಭಗವದ್ಗೀತಾ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಗವದ್ಗೀತೆ ಅಗತ್ಯ: ದೇಶವು ಒಂದಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿದ್ದು, ದೊಡ್ಡ ದೊಡ್ಡ ವ್ಯಕ್ತಿಗಳು ಭ್ರಷ್ಟಾಚಾರವೆಸಗುತ್ತಿದ್ದಾರೆ. ವಿದ್ಯಾವಂತರು ಭಯೋತ್ಪಾದಕರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಮುಂದಿನ ತಲೆಮಾರಿನ ಮಕ್ಕಳಿಗೆ ನೈತಿಕತೆಯ ಪಾಠ ಹೇಳಿಕೊಡದೇ ಹೋದರೆ, ದೇಶ ಮತ್ತಷ್ಟು ಅಧಃಪತನಕ್ಕೆ ಇಳಿಯುತ್ತದೆ. ಮೌಲ್ಯದ ಕೊರತೆ ಎದುರಿಸುತ್ತಿರುವ ಶಿಕ್ಷಣ ವ್ಯವಸ್ಥೆಗೆ ಭಗವದ್ಗೀತೆಯಂತಹ ಶ್ರೇಷ್ಠ ಗ್ರಂಥದ ಮಾರ್ಗಸೂಚಿ ಅಗತ್ಯ ಎಂದರು.
ವ್ಯಕ್ತಿತ್ವ ವಿಕಸನ, ನೈತಿಕತೆ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಕಾಯ್ದುಕೊಳ್ಳುವುದು ಭಗವದ್ಗೀತೆ ಅಭಿಯಾನದ ಪ್ರಮುಖ ಆಶಯವಾಗಿದೆ. ಮನುಷ್ಯ ಸಮಸ್ಯೆ ಒಳಬೇಗುದಿಯಲ್ಲಿ ಬಳಲುತ್ತಿದ್ದಾನೆ. ಅವನ ಮನಸ್ಸನ್ನು ಅರಳಿಸುವ ಕೆಲಸವಾಗಬೇಕು ಎಂದವರು ಹೇಳಿದರು.
ಎಲ್ಲರನ್ನೂ ತಲುಪಲಿ: ವೇದದ ಅನಂತ ಅರ್ಥವನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ಭಗವದ್ಗೀತೆ ಎಲ್ಲಾ ಜನರಿಗೂ ತಲುಪಬೇಕು. ಭಗವದ್ಗೀತೆ ಕುರಿತು ಅರಿತುಕೊಳ್ಳುವುದು ಎಂದರೆ ವೈಯಕ್ತಿಕ ಮೋಕ್ಷಸಾಧನೆ ಎಂಬ ಅರ್ಥ ಸರಿಯಲ್ಲ ಎಂದರು.
ಶಿಕಾರಿಪುರ ದತ್ತಕೇವಲಾನಂದ ಆಶ್ರಮದ ಶ್ರೀ ಶಿವಾನಂದ ತೀರ್ಥ ಶ್ರೀ, ರಾಮಕೃಷ್ಣ ಮಿಷನ್ನಿನ ಸಂಪನ್ನಾನಂದಜಿ ಮಾತಾಜಿ, ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ಶೃಂಗೇರಿ ಶಂಕರಮಠದ ಎಸ್.ಆರ್. ತಿಮ್ಮಪ್ಪ, ಜಿಪಂ ಮಾಜಿ ಸದಸ್ಯ ಕಾಗೋಡು ಅಣ್ಣಪ್ಪ, ಭಗವದ್ಗೀತೆ ಅಭಿಯಾನದ ಜಿಲ್ಲಾ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ, ಸಾಗರ ಶಾಖೆಯ ಕಾರ್ಯಾಧ್ಯಕ್ಷ ಆರ್.ಎನ್.ಶಾಸ್ತ್ರಿ, ಅಶ್ವಿನಿ ಕುಮಾರ್ ಹಾಜರಿದ್ದರು.
ಭಗವದ್ಗೀತೆ ಕಂಠಪಾಠ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಾಗೇಂದ್ರ ಗುಮ್ಮಾನಿ ಸ್ವಾಗತಿಸಿದರು.ಬಾಪಟ್ ಅಭಿನಂದನಾ ಪತ್ರ ವಾಚಿಸಿದರು.ಮಂಜಪ್ಪ ವಂದಿಸಿದರು. ಸದಾನಂದ ಶರ್ಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement