ಜನರ ನಿರೀಕ್ಷೆಗೆ ಕೈಕೊಟ್ಟ ಕಾಂಗ್ರೆಸ್: ಈಶ್ವರಪ್ಪ
ಶಿವಮೊಗ್ಗ: ಜನರ ನಿರೀಕ್ಷೆಗೆ ತಕ್ಕಂತೆ ಕಾಂಗ್ರೆಸ್ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಸರ್ಕಾರದ ಆಡಳಿತ ವೈಖರಿಯನ್ನು ರೈತರು ಟೀಕಿಸುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರೈತರು, ದುರ್ಬಲ ವರ್ಗದವರು, ಹಿಂದುಳಿದ ಸಮಾಜದವರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ, ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ರೈತ ಸಾವಿನ ನಂತರ ಜ್ಞಾನೋದಯ: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದರೆ, ಮುಖ್ಯಮಂತ್ರಿಗಳಾಗಲಿ, ಸಕ್ಕರೆ ಸಚಿವರಾಗಲಿ ಇತ್ತ ಕಡೆ ಗಮನಹರಿಸಲಿಲ್ಲ. ರೈತನೊಬ್ಬನ ಬಲಿ ತೆಗೆದುಕೊಂಡ ನಂತರ ಜ್ಞಾನೋದಯವಾಗಿದೆ. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತನ ಕುಟುಂಬಕ್ಕೆ ಸಾಂತ್ವನ ಹೇಳುವುದನ್ನು ಬಿಟ್ಟು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಪ್ರಶ್ನಿಸುವುದು ಸಮಂಜಸವಲ್ಲ ಎಂದರು.
ಕೇವಲ ನಕಾರಾತ್ಮಕ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ಅವರಂತಹ ಮುಖ್ಯಮಂತ್ರಿಯನ್ನು ಹಿಂದೆಂದೂ ನೋಡಿರಲಿಲ್ಲ. ಯಾವುದೇ ವಿಷಯದ ಕುರಿತು ವಿರೋಧ ಪಕ್ಷಗಳ ಸದಸ್ಯರು ಪ್ರಶ್ನೆ ಕೇಳಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗೊಮ್ಮೆ, ಈಗೊಮ್ಮೆ ಉತ್ತರ ನೀಡುತ್ತಾರೆ. ಅದೂ ನಕಾರಾತ್ಮಕ ಉತ್ತರ. ಇನ್ನು ಸಚಿವರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮಲೆನಾಡಲ್ಲಿ ಉಗ್ರರ ಭೀತಿ: ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಕಾಂಗ್ರೆಸ್ನವರು ದೇಶದ ವ್ಯವಸ್ಥೆಯನ್ನು ಹಾಗೂ ರಾಜಕಾರಣವನ್ನು ಕೆಸರು ಮಾಡಿಟ್ಟಿದ್ದಾರೆ. ಈ ಕೆಸರಿನಲ್ಲಿ ಮೋದಿ ಎಂಬ ಕಮಲವನ್ನು ಹುಟ್ಟಿಸಬೇಕಿದೆ. ಇದಕ್ಕೆ ಕಾರ್ಯಕರ್ತರ ಶ್ರಮ ಅಗತ್ಯವಿದೆ. ದೇಶ ದ್ರೋಹದ ಜಾಲ ದೇಶದೆಲ್ಲೆಡೆ ಹಬ್ಬಿದೆ. ಉಗ್ರರು ಇಲ್ಲದ ಪ್ರದೇಶವೇ ಇಲ್ಲ ಎನ್ನುವ ಸ್ಥಿತಿ ಎದುರಾಗಿದೆ. ಮಲೆನಾಡಿನಲ್ಲೂ ಉಗ್ರರು ತಲೆತಪ್ಪಿಸಿಕೊಂಡಿದ್ದಾರೆ ಎಂಬುದು ಆತಂಕದ ಸಂಗತಿ ಎಂದರು.
ಅಭ್ಯರ್ಥಿಗಳಿಗೆ ಬರವಿಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಅಭ್ಯರ್ಥಿಗಳಿಗೆ ಬರವಿಲ್ಲ. ಕಳೆದ ವಾರ ನಡೆದ ಜಿಲ್ಲಾ ಬಿಜೆಪಿ ಪ್ರಮುಖರ ಸಭೆಯಲ್ಲಿ ಐದು ಮಂದಿ ಅಭ್ಯರ್ಥಿಗಳ ಹೆಸರು ಪರಿಶೀಲಿಸಲಾಗಿದೆ. ನಾನು ಸೇರಿದಂತೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಅವರ ಹೆಸರುಗಳು ಸಭೆಯಲ್ಲಿ ಪ್ರಸ್ತಾಪವಾಗಿವೆ ಎಂದರು. ಅಭ್ಯರ್ಥಿ ಯಾರೇ ಆಗಲಿ ಗೆಲವು ಮಾತ್ರ ಬಿಜೆಪಿ ಪಕ್ಷದ್ದೇ ಆಗಿರಬೇಕು. ಇದಕ್ಕೆ ಕಾರ್ಯಕರ್ತರು ಶ್ರಮಪಡಬೇಕು. ಬೇರೆ ಪಕ್ಷಗಳು ಯಾವ ರೀತಿಯ ಕಾರ್ಯ ಯೋಜನೆ ರೂಪಿಸುತ್ತವೆ ಎಂಬುದನ್ನು ನೋಡಿಕೊಂಡು ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗುವುದು. ಬಿಜೆಪಿಯ ಕಾರ್ಯಕರ್ತರೇ ಅಭ್ಯರ್ಥಿಯಾಗಿದ್ದಾರೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಆರಗ ಜ್ಞಾನೇಂದ್ರ, ಮಹೇಂದ್ರ ನಾಥ್, ಎನ್.ಜೆ. ರಾಜಶೇಖರ್, ಎಚ್.ಸಿ. ಬಸವರಾಜಪ್ಪ ಮತ್ತಿತರರು ಇದ್ದರು.