ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವ್ಯಕ್ತಿ ಸಾಧನೆಗೆ ಹುಟ್ಟೂರ ಕೊಡುಗೆ ಅಪಾರ

Lingaraj Badiger
Updated On : 3 Dec 2013, 10:40 am

ಕ.ಪ್ರ. ವಾರ್ತೆ, ಶಿಕಾರಿಪುರ, ಡಿ.2
ವ್ಯಕ್ತಿಯ ಸಾಧನೆಗೆ ಹುಟ್ಟೂರಿನ ಕೊಡುಗೆ ಅಪಾರವಾಗಿದ್ದು, ಈ ದಿಸೆಯಲ್ಲಿ ಚಿತ್ರರಂಗದಲ್ಲಿ ಸಾಧನೆಗೆ ಸ್ವಕ್ಷೇತ್ರ ಶಿಕಾರಿಪುರದ ಜನತೆಯ ಆಶೀರ್ವಾದ ಹಾರೈಕೆಯನ್ನು ಮರೆಯಲು ಅಸಾಧ್ಯ ಎಂದು ಚಿತ್ರರಂಗದ ನಿರ್ದೇಶಕ ಎ. ಬಂಗಾರು ಹೇಳಿದರು.
ಪಟ್ಟಣದ ದಿ. ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಶನಿವಾರ ರಾತ್ರಿ ಕನ್ನಡ ಯುವಕ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಐತಿಹಾಸಿಕವಾಗಿ ಶಿಕಾರಿಪುರ ಅತ್ಯಂತ ಪ್ರಸಿದ್ಧವಾಗಿದ್ದು, ಸಾಂಸ್ಕೃತಿಕವಾಗಿ ಇತ್ತೀಚಿನ ದಿನದಲ್ಲಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಜವಾಬ್ದಾರಿ ಹೆಚ್ಚು: ಸ್ಥಳೀಯ ಕನ್ನಡ ಯುವಕ ಸಂಘ ಸ್ಥಳೀಯ ಹೊಸ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಇಂತಹ ಕಾರ್ಯದಿಂದ ಕಲಾವಿದರಿಗೆ ಸ್ಫೂರ್ತಿಯ ಜತೆಗೆ ಜವಾಬ್ದಾರಿ ಹೆಚ್ಚಿಸಲಿದೆ ಎಂದರು.
ವ್ಯಕ್ತಿಯೊಬ್ಬ ತನ್ನ ಕ್ಷೇತ್ರದಲ್ಲಿ ಅಸಾಧ್ಯ ಸಾಧನೆ ಮೆರೆಯಲು ಹುಟ್ಟೂರಿನ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ ಚಲನಚಿತ್ರರಂಗದಲ್ಲಿ ಇದುವರೆಗಿನ ಪ್ರಶಸ್ತಿ ಗೌರವಕ್ಕೆ ಶಿಕಾರಿಪುರದ ಜನತೆಯ ಆಶೀರ್ವಾದ ಹಾರೈಕೆ ಮುಖ್ಯ ಕಾರಣವಾಗಿದೆ ಎಂದರು.
ನಾಡಿಗೆ ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಹಲವು ಕವಿ, ಸಾಹಿತಿ, ನಿರ್ದೇಶಕ, ನಾಟಕಕಾರರು, ರಂಗ ಕಲಾವಿದರು, ಚಲನಚಿತ್ರ ನಟರನ್ನು ನಾಡಿಗೆ ಪರಿಚಯಿಸಿದ ಹೆಮ್ಮೆ ಹೊಂದಿದ್ದು, ಈ ದಿಸೆಯಲ್ಲಿ ರಾಷ್ಟ್ರಕವಿ ಕುವೆಂಪು, ಗಿರೀಶ್ ಕಾಸರವಳ್ಳಿ ಮತ್ತಿತರರು ಜಿಲ್ಲೆಯ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಪ್ರಥಮ ದೊರೆ: ಜೆಡಿಎಸ್ ಮುಖಂಡ ಎಚ್.ಟಿ. ಬಳಿಗಾರ್ ಮಾತನಾಡಿ, ಶಿಕಾರಿಪುರ ಶಿವಶರಣರ ನಾಡು ಎಂದು ಪ್ರಸಿದ್ಧವಾಗಿದ್ದು, ಇಲ್ಲಿನ ಪ್ರತಿಯೊಂದು ಶಾಸನ, ಕಲ್ಲುಗಳು ಇತಿಹಾಸ ತಿಳಿಸುತ್ತದೆ. ಕನ್ನಡ ಪ್ರಥಮ ದೊರೆ  ಮಯೂರವರ್ಮ ತಾಲೂಕಿನ ತಾಳಗುಂದದಲ್ಲಿ ಜನಿಸಿ ಅಧಿಪತ್ಯ ಸ್ಥಾಪಿಸಿ ತಾಳಗುಂದವನ್ನು ವಿಶ್ವ ವಿದ್ಯಾಕೇಂದ್ರವಾಗಿಸಿದೆ. ಈ ಸ್ಥಳದಲ್ಲಿ ಉತ್ಖನನ ನಡೆಸಿ ಸಂಶೋಧನೆ ಕೈಗೊಂಡಲ್ಲಿ ಇತಿಹಾಸದ ಬಹು ದೊಡ್ಡ ಮಾಹಿತಿ ಭಂಡಾರ ದೊರೆಯಲಿದೆ ಎಂದರು.
ಎ. ಬಂಗಾರು, ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ, ಜೆಡಿಎಸ್ ಮುಖಂಡ ಬಳಿಗಾರ್, ತಹಸೀಲ್ದಾರ್ ರಾಮೋಜಿರಾವ್ ಮೊದಲಾದವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಯುವಕ ಸಂಘದ ಅಧ್ಯಕ್ಷ ಹರೀಶ್ ಹೂಗಾರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್, ಪಟ್ಟಣ ಠಾಣೆ ಪಿಎಸ್ಸೈ ಕಿರಣ ಕುಮಾರ್, ಮುಖಂಡ ಸ.ನ. ಮಂಜಪ್ಪ, ಚೋರಡಿ ಗಿಡ್ಡೇಶ್, ನಗರದ ಮಾಲತೇಶ್, ಗುಡ್ಡಳ್ಳಿ ಸಂತೋಷ್, ಸುರೇಶ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement