ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈತರೇ, ಆತಂಕ ಬಿಡಿ, ಖರೀದಿ ಕೇಂದ್ರಕ್ಕೆ ಬನ್ನಿ

Lingaraj Badiger
Updated On : 4 Dec 2013, 10:46 am

ಶಿವಮೊಗ್ಗ : ಜಿಲ್ಲೆಯಲ್ಲಿ ಆರಂಭಿಸಿರುವ ಬತ್ತ, ಜೋಳ ಖರೀದಿ ಕೇಂದ್ರದ ಕುರಿತು ರೈತರ ನಿರಾಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ರೈತರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಆರಂಭಿಸಿದೆ.
ಖರೀದಿ ಹಣ ಗರಿಷ್ಠ ವಾರದೊಳಗೆ ಪಾವತಿ, ನಿಯಮಗಳ ಸಡಿಲಿಕೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಾಸ್ಕ್‌ಫೋರ್ಸ್ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್, ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಗೆ ಖರೀದಿಸಿದ ಮೊತ್ತ ಮೂರರಿಂದ ಏಳು ದಿನದೊಳಗಾಗಿ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದರು.
ಗುಣಮಟ್ಟ ಪರೀಕ್ಷೆ ಕಡ್ಡಾಯ: ರೈತರ ಅನುಕೂಲಕ್ಕಾಗಿಯೇ ಸರ್ಕಾರ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿಸುವ ಯೋಜನೆ ರೂಪಿಸಿದ್ದು, ಅದರಂತೆ ರೈತರು ಮಧ್ಯವರ್ತಿಗಳ ವಂಚನೆಗೊಳಗಾಗದೆ ನೇರವಾಗಿ ಖರೀದಿ ಕೇಂದ್ರಗಳಿಗೆ ತಮ್ಮ ಧಾನ್ಯಗಳನ್ನು ಮಾರಾಟ ಮಾಡಿ ಶೀಘ್ರವೇ ಖರೀದಿ ಮೊತ್ತ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 11 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ 1310 ಹಾಗೂ ಬತ್ತ ಪ್ರತಿ ಕ್ವಿಂಟಲ್‌ಗೆ 1600 ದರದಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು. ಖರೀದಿಸಿದ ಧಾನ್ಯಗಳ ಶೇಖರಣೆ ದೃಷ್ಟಿಯಿಂದ ಧಾನ್ಯದ ಗುಣಮಟ್ಟದ ಪರೀಕ್ಷೆ ಹಾಗೂ ಸಂಬಂಧಿಸಿದ ರೈತರ ದಾಖಲಾತಿಗಳನ್ನು ಕಡ್ಡಾಯಗೊಳಿಸಲಾಗಿದೆ. ಅದರಂತೆ ದೃಢೀಕರಿಸಿದ ತಮ್ಮ ಮಾದರಿ ಧಾನ್ಯ ಹಾಗೂ ದಾಖಲೆಗಳೊಂದಿಗೆ ಖರೀದಿ ಕೇಂದ್ರಗಳಲ್ಲಿ ನೀಡುವ ಕೂಪನ್‌ನಲ್ಲಿ ತಿಳಿಸಿದ ದಿನಾಂಕದಂದು ತಮ್ಮ ಧಾನ್ಯಗಳನ್ನು ಖರೀದಿಗೆ ಒಳಪಡಿಸಬಹುದು ಎಂದರು.
ಗೊಂದಲಕ್ಕೆ ಅವಕಾಶವಿಲ್ಲ: ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳ ಆರಂಭವಾಗಿರುವ ಬಗ್ಗೆ ವ್ಯಾಪಕ ಮಾಹಿತಿ ನೀಡಲಾಗಿದೆ. ಹಾಗೂ ಖಾಸಗಿ ವರ್ತಕರಿಗಿಂತ ಹೆಚ್ಚು ಬೆಲೆಯನ್ನು ಸರ್ಕಾರ ನಿಗದಿಗೊಳಿಸಿದ್ದು, ರೈತರು ಮಧ್ಯವರ್ತಿಗಳ ವಂಚನೆಗೆ ಒಳಗಾಗದೆ ಯೋಜನೆಯ ಉಪಯೋಗ ಪಡೆಯಬೇಕು. ಖರೀದಿ ಕೇಂದ್ರಗಳಲ್ಲಿ ರೈತರಿಗೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ಖರೀದಿ ಮೊತ್ತವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಕೃಷಿ ಉತ್ಪನ್ನ ಮಾರುಕಟ್ಟೆ ಉಪ ನಿರ್ದೇಶಕ ವಿನೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.


ರೈತರಿಗೆ ವಿನಾಯಿತಿ
ರೈತರು ಖರೀದಿ ಕೇಂದ್ರಗಳಲ್ಲಿ ತಮ್ಮ ಧಾನ್ಯಗಳನ್ನು ಸುಲಭವಾಗಿ ಬೆಂಬಲ ಬೆಲೆಗೆ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ರೈತರ ಅನುಕೂಲಕ್ಕಾಗಿ ಈ ಹಿಂದೆ ನಿಗದಿಗೊಳಿಸಿದ್ದ 50 ಕೆ.ಜಿ. ಚೀಲದಲ್ಲಿ ತರಬೇಕೆಂಬ, ಗ್ರೇಡ್ ಎ ಬತ್ತವನ್ನು ಮಾತ್ರ ಖರೀದಿಸಬೇಕೆಂಬ ಹಾಗೂ ಗರಿಷ್ಠ 25 ಕ್ವಿಂಟಲ್ ಖರೀದಿಸುವ ಮಿತಿಯಿಂದ ವಿನಾಯಿತಿ ನೀಡಲಾಗಿದೆ.
ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ 50, 75 ಹಾಗೂ 100 ಕೆ.ಜಿ.ವರೆಗಿನ ಚೀಲದಲ್ಲಿ ತಮ್ಮ ಧಾನ್ಯವನ್ನು ಖರೀದಿ ಕೇಂದ್ರಗಳಿಗೆ ತರಲು ಅವಕಾಶ ಕಲ್ಪಿಸಲಾಗಿದೆ. ಬತ್ತದ ಗ್ರೇಡ್ ಎ ಬದಲಾಗಿ ಸಾಮಾನ್ಯ ಬತ್ತಕ್ಕೂ ಪ್ರತಿ ಕ್ವಿಂಟಲ್‌ಗೆ 1600ಗೆ ಖರೀದಿಸಲು ಹಾಗೂ ಗರಿಷ್ಠ ಮಿತಿ 25 ಕ್ವಿಂಟಲ್‌ಗಿಂತಲೂ ಹೆಚ್ಚು ಧಾನ್ಯ ಖರೀದಿಗೊಳಪಡಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ರೈತರು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಎಲ್ಲೆಲ್ಲಿ ಖರೀದಿ ಕೇಂದ್ರ?
ಜಿಲ್ಲೆಯ 11 ಎಪಿಎಂಸಿ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಆನವಟ್ಟಿ, ರಿಪ್ಪನ್‌ಪೇಟೆ, ಸಾಗರ, ಆನಂದಪುರ, ತೀರ್ಥಹಳ್ಳಿ ಹಾಗೂ ಹೊಸನಗರ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಬತ್ತ ಹಾಗೂ ಮೆಕ್ಕೇಜೋಳವನ್ನು ಸರ್ಕಾರ ನಿಗದಿಗೊಳಿಸಿದ ಬೆಂಬಲ ಬೆಲೆಗೆ ಖರೀದಿಸಲಾಗುತ್ತಿದೆ.

ರೈತರು ತರಬೇಕಾದ ದಾಖಲಾತಿಗಳೇನು?
ರೈತರು ತಮ್ಮ ಉತ್ಪನ್ನಗಳನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಕೆಲವು ದೃಢೀಕೃತ ದಾಖಲಾತಿಗಳನ್ನು ಹಾಗೂ ಮಾದರಿ ಧಾನ್ಯದ ಗುಣಮಟ್ಟವನ್ನು ಪರೀಕ್ಷೆ ಮಾಡಿಸಬೇಕಿದೆ.
ಅದರಂತೆ ಕಂಪ್ಯೂಟರೀಕೃತ ತಹಸೀಲ್ದಾರ್ ಅಥವಾ ಉಪ ತಹಸೀಲ್ದಾರ್ ದೃಢೀಕರಿಸಿದ ಪಹಣಿ, ರೈತರ ಹೆಸರು ಮತ್ತು ಬೆಳೆದ ಉತ್ಪನ್ನದ ಹೆಸರು, ಪ್ರಮಾಣ ನಮೂದಿಸಿದ ಕೂಪನ್‌ನನ್ನು ತಹಸೀಲ್ದಾರ್, ಉಪ ತಹಸೀಲ್ದಾರ್ ಅಥವಾ ಕಂದಾಯ ಅಧಿಕಾರಿಗಳಿಂದ ದೃಢೀಕರಿಸಿರಬೇಕು. ಕಂದಾಯ ಅಧಿಕಾರಿಗಳಿಂದ ಬೆಳೆ ದೃಢೀಕರಣ ಪತ್ರ, ರಾಷ್ಟ್ರೀಕೃತ ಬ್ಯಾಂಕ್‌ನ ಪಾಸ್ ಪುಸ್ತಕದ ಛಾಯಾಪ್ರತಿ, ರದ್ದುಪಡಿಸಿದ ಒಂದು ಚೆಕ್‌ಲೀಫ್‌ನ್ನು ತರಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement