ವೈದ್ಯರ ಗೈರು: ಸಾರ್ವಜನಿಕರ ಪ್ರತಿಭಟನೆ
ಸೊರಬ:ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡ ವ್ಯಕ್ತಿಗೆ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗದಿರುವುದರಿಂದ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಎದುರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ರಾತ್ರಿ 8 ಗಂಟೆಗೆ ಪಪಂ ಎದುರಿನ ವೃತ್ತದ ಬಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಇದರಲ್ಲಿ ಪಟ್ಟಣದ ಮೀನು ವ್ಯಾಪಾರಿ ಬೈಕ್ ಸವಾರ ಶಫಿವುಲ್ಲಾರಿಗೆ ತೀವ್ರ ಗಾಯಗಳಾಗಿತ್ತು.
ಅಲ್ಲಿಯೇ ಇದ್ದ ಸಾರ್ವಜನಿಕರು ತಕ್ಷಣ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ತಂದಾಗ ಅಲ್ಲಿ ಶುಶ್ರೂಷಕಿ ಹೊರತುಪಡಿಸಿ ಚಿಕಿತ್ಸೆ ನೀಡಲು ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿ ನಿರತರಾಗಿರಬೇಕಿದ್ದ ವೈದ್ಯರು ಇರಲಿಲ್ಲ. ಆದ್ದರಿಂದ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಅಲ್ಲಿದ್ದ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಈ ವೇಳೆ ಹಾಜರಾದ ಪೊಲೀಸರು ಪ್ರತಿಭಟನಕಾರರನ್ನು ಸಮಾಧಾನಪಡಿಸಲು ಮುಂದಾದಾಗ ಸಾರ್ವಜನಿಕರು ಸಬ್ ಇನ್ ಪೆಕ್ಟರ್ ಭೀಮಗೌಡ ಅವರೊಂದಿಗೆ ವಾಗ್ವಾದಕ್ಕಿಳಿದರು. ನಂತರ, ಗಾಯಗೊಂಡ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು.
ಈ ಸಂದರ್ಭದರ್ಭದಲ್ಲಿ ಅನ್ಸರ್, ಗುಡವಿ ಅಕ್ರಂ, ಅಯೂಬ್, ನಾಸಿರ್, ಹಿದಾಯತ್ ವುಲ್ಲಾ, ಸೈಯದ್ ಸಿರಾಜ್, ಗುಡವಿ ಅಸ್ಲಮ್, ಜಿಯಾವುಲ್ಲಾ, ಅಮಾನುಲ್ಲಾ, ಆದಿಲ್, ಎಂ. ರಾಮಪ್ಪ, ಎಂ. ಬಸವರಾಜ್ ಮೊದಲಾದವರು ಇದ್ದರು.