100 ಎಕರೆ ಭೂಮಿಗೆ ಪ್ರಸ್ತಾವನೆ
ಶಿವಮೊಗ್ಗ: ಮೆಕ್ಕೆಜೋಳಕ್ಕೆ ಸಂಬಂಧಿಸಿದಂತೆ ಒಂದು ಬೃಹತ್ ಮಾರುಕಟ್ಟೆ ಮತ್ತು ಸಂಸ್ಕರಣ ಘಟಕ ಸ್ಥಾಪನೆಗೆ 100 ಎಕರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಪಿಎರ್ಸಿ ಕಾರ್ಯದರ್ಶಿ ಸಿ. ಪಾತಲಿಂಗಪ್ಪ ಹೇಳಿದರು.
ಅವರು ಬುಧವಾರ ನಗರದಲ್ಲಿ ಜಿಲ್ಲಾ ಮೆಕ್ಕೆಜೋಳ ವರ್ತಕರ ಸಂಘ ಉದ್ಘಾಟಿಸಿ, ಈ ಯೋಜನೆ ಅನುಷ್ಠಾನಕ್ಕೆ ಬಂದರೆ ವರ್ತಕರಿಗೆ ಅನುಕೂಲವಾಗಲಿದೆ ಎಂದರು.
ಕೃಷಿ ಮಾರುಕಟ್ಟೆ ಸಮಿತಿಯು ಎಲ್ಲಾ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡಿ ರೈತರಿಗೆ ನ್ಯಾಯ ದೊರಕಿಸುವುದು. ಒಂದು ವ್ಯವಸ್ಥಿತ ಮಾರುಕಟ್ಟೆ ನಿರ್ಮಾಕ್ಕೆ ತುರ್ತಾಗಿ ಜಾಗ ಬೇಕಿದ್ದು, ಇದಕ್ಕಾಗಿ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದರು.
ವರ್ತಕರ ಸಂಘಗಳ ಸ್ಥಾಪನೆಯಿಂದ ವರ್ತಕರಿಗೆ ಆಗುತ್ತಿರುವ ತೊಂದರೆಗಳನ್ನು ಸಂಘಟಿತರಾಗಿ ನಿವಾರಿಸಿಕೊಳ್ಳಲು ಸಾಧ್ಯ. ಈ ಹಿಂದೆ ಖರೀದಿದಾರರ ನೆಪದಲ್ಲಿ ರೈತರಿಂದ ಮೆಕ್ಕೆಜೋಳ ಸಂಗ್ರಹಿಸಿ ರೈತರಿಗೆ ಟೋಪಿ ಹಾಕಿದ ಉದಾಹರಣೆಗಳು ಬಹಳಷ್ಟಿವೆ. ಹಲವರು ವ್ಯಾಪಾರಸ್ಥರಿಗೆ ಕೆಲ ಕಂಪನಿಗಳ ಮಾಲನ್ನು ಖರೀದಿಸಿ ಹಣ ಕೊಡದೇ ನಷ್ಟವನ್ನುಂಟು ಮಾಡಿವೆ. ಇಂತಹ ಸಂದರ್ಭದಲ್ಲಿ ಸಂಘಟಿತರಾಗಿರುವುದು ಸಹಕಾರಿ ಎಂದರು.
ಈ ಸಂದರ್ಭದಲ್ಲಿ ಎನ್.ಬಿ. ಶಂಕರಪ್ಪ, ಬಿ. ಶಿವಣ್ಣ, ಡಿ.ವಿ. ಗೋಪಾಲರೆಡ್ಡಿ, ಕಡಿದಾಳು ಗೋಪಾಲ್, ಬಿ.ಎಚ್. ರಮೇಶಪ್ಪ, ಕೆ. ಜಾವೀದ್, ಬಿ.ಎಸ್. ದೇವಿಕುಮಾರ್, ಪುರುಷೋತ್ತಮ್ ಸೇರಿದಂತೆ ಹಲವರು ಇದ್ದರು.