ಒಳ ಮೀಸಲಾತಿಗೆ ಒತ್ತಾಯಕ್ಕೆ ಆಗ್ರಹ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.4
ನ್ಯಾ. ಎ.ಜೆ. ಸದಾಶಿವ ಆಯೋಗದ ಶಿಫಾರಸಿನಂತೆ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶದ ಜಾತಿ ವ್ಯವಸ್ಥೆಯೊಳಗಿನ ತಾರತಮ್ಯ, ಅವ್ಯವಸ್ಥೆ ಹಾಗೂ ದಲಿತ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸಂವಿಧಾನದಲ್ಲಿ ಮೀಸಲಾತಿ ಅವಕಾಶ ಕಲ್ಪಿಸಿದ್ದಾರೆ.
ಆದರೆ, ಸಾಮಾಜಿಕ ವ್ಯವಸ್ಥೆಯಲ್ಲಿ ಧ್ವನಿ ಕಳೆದುಕೊಂಡಿರುವ ಪರಿಶಿಷ್ಟ ಜಾತಿಯಲ್ಲಿನ ಮಾದಿಗ ಸಮುದಾಯ ಇಂದಿಗೂ ಸಂಕಷ್ಟದ ಜೀವನ ನಡೆಯುತ್ತಿದೆ. ಸರ್ಕಾರದಿಂದ ನ್ಯಾಯಯುತ ಸೌಲಭ್ಯಗಳು ಈ ಸಮುದಾಯಕ್ಕೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನ್ಯಾ. ಎ.ಜೆ. ಸದಾಶಿವ ಆಯೋಗದ ಶಿಫಾರಸು ಜಾರಿಗೊಳಿಸಬೇಕು. ಈ ಮೂಲಕ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿರಂತರ ಹೋರಾಟ: ಮಾದಿಗ ಸಮುದಾಯ ಎದುರಿಸುತ್ತಿರುವ ತಾರತಮ್ಯ ನಿವಾರಣೆಗೆ ಹಾಗೂ ಸಮರ್ಪಕ ಮೀಸಲಾತಿಗೆ ಒತ್ತಾಯಿಸಿ ಸಮಿತಿಯು ನಿರಂತರ ಹೋರಾಟ ನಡೆಸಿದೆ.
ಇದರ ಫಲವಾಗಿ 2005ರಲ್ಲಿ ಪರಿಶಿಷ್ಟ ಜಾತಿ ವಿಚಾರಣಾ ಆಯೋಗವನ್ನು ನ್ಯಾಯಾಧೀಶ ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಈ ಆಯೋಗವು 2012ರ ಜೂನ್ 14ರಂದು ತನ್ನ ವರದಿ ಸಲ್ಲಿಸಿತು. ಈ ವರದಿಯಲ್ಲಿ ಮಾದಿಗ ಸಮಾಜಕ್ಕೆ ಅಥವಾ ಇತರೆ ಸಮಾಜಕ್ಕೆ ಮೀಸಲಾತಿಯಲ್ಲಿ ಆಗುತ್ತಿದ್ದ ತಾರತಮ್ಯ ಪರಿಶಿಷ್ಟ ಜಾತಿಗಳಲ್ಲಿನ ಇತರೆ ಎಲ್ಲಾ ಜಾತಿಗಳಿಗಿಂತ ಹೆಚ್ಚಾಗಿದೆ ಎಂದು ತಿಳಿಸಿದೆ.
ಶೇ. 6ರಷ್ಟು ಒಳ ಮೀಸಲಾತಿ ಕಲ್ಪಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರವು ವರದಿಯಲ್ಲಿನ ಶಿಪಾರಸುಗಳ ಅನುಷ್ಠಾನಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿತ್ತು ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಬಿ.ಎ. ಭಾನುಪ್ರಸಾದ್, ಜಿಲ್ಲಾಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಆರ್. ರಂಗನಾಥ್, ಮುಖಂಡರಾದ ರಾಮಚಂದ್ರ, ವೆಂಕಟೇಶ್, ಯಶವಂತ್, ನರಸಿಂಹಪ್ಪ, ವೆಂಕಟೇಶ್, ಹರೀಶ್ ಬಾಬು, ಸೆಂಥಿಲ್ ಕುಮಾರ್, ರಾಮು ಸೇರಿದಂತೆ ಹಲವರು ಇದ್ದರು.