ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿವೇಶನಕ್ಕೆ ಪ್ರತಿಭಟನೆ

Lingaraj Badiger
Updated On : 5 Dec 2013, 10:52 am

ಶಿವಮೊಗ್ಗ: ವಿರೂಪಿನಕೊಪ್ಪ ಗ್ರಾಮದ ಸರ್ವೆ ನಂ.8ರಲ್ಲಿರುವ 2.37 ಎಕರೆ ಜಮೀನಿನಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ವಿ. ಭಗವಾನ್ ನೇತೃತ್ವದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.
ಈ ಜಮೀನು ಸರ್ಕಾರಿ ಜಾಗವಾಗಿದ್ದು, ಪಹಣಿಯಲ್ಲಿ ದನಗಳಿಗೆ ಮುಫತ್ತು ಎಂದು ದಾಖಲಾಗಿರುತ್ತದೆ. ಈ ಭೂಮಿಯನ್ನು ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಹಣಬಲ, ರಾಜಕೀಯ ಬಲ ಬಳಸಿ, ಸುಳ್ಳು ದಾಖಲೆ ಸೃಷ್ಟಿಸಿ ಕಬಳಿಸುತ್ತಿದ್ದಾರೆ. ಜಮೀನು ಲಪಟಾಯಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಲಸಂಖ್ಯಾತ ಸಮುದಾಯದವರು ಹಾಗೂ ಬಡ ಕೂಲಿ ಕಾರ್ಮಿಕರು ವಾಸವಾಗಿದ್ದು, ಇವರ್ಯಾರಿಗೂ ಸ್ವಂತ ನೆಲೆ ಇಲ್ಲ. ಆದ್ದರಿಂದ ಈ ಬಡ ನಿವೇಶನರಹಿತರಿಗೆ ಸ್ವಂತ ಸೂರು ಹೊಂದಲು ಅಗತ್ಯ ನಿವೇಶನ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಪ್ರತಿಭಟನಾಕಾಕರು ಹೇಳಿದ್ದಾರೆ. ಆದ್ದರಿಂದ ಸರ್ವೇ ನಂ.8ರಲ್ಲಿರುವ ಜಮೀನನ್ನು ಗ್ರಾಮದ ಬಡ ಜನರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಮಂಜು, ರಾಜು ಹಾಗೂ ಹಲವರು ಇದ್ದರು.

ಹಾಸ್ಟೆಲ್ ಸೌಲಭ್ಯಕ್ಕಾಗಿ ಧರಣಿ
ಶಿವಮೊಗ್ಗ: ಶಂಕರಘಟ್ಟದ ಪದವೀಧರರ ಬಿಸಿಎಂ ಹಾಸ್ಟೆಲ್ನಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ನಿವಾರಿಸುವಂತೆ ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.  ಕುವೆಂಪು ವಿಶ್ವವಿದ್ಯಾಲಯದ ಶಂಕರಘಟ್ಟ ಆವರಣದಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ವಸತಿ ಕಲ್ಪಿಸಲಾಗಿದ್ದು, ಅಲ್ಲಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ಬಾಡಿಗೆಗೆ ತೆಗೆದುಕೊಂಡಿರುವ ಖಾಸಗಿ ಕಟ್ಟಡದಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ವಿಚಾರದಂತೆ ಪ್ರತಿದಿನ ಮೂರು ಬಾರಿ ಊಟಕ್ಕೆ ಹೋಗಿಬರುವುದೆಂದರೆ, 18 ಕಿ.ಮೀ. ನಡೆದಾಡಬೇಕಾಗುತ್ತದೆ ಎಂದು ದೂರಿದರು. ಈಗ ಪರೀಕ್ಷೆಯ ಸಮಯವಾಗಿದ್ದು, ನಮಗೆ ತುಂಬಾ ತೊಂದರೆಯಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಲಯಪಾಲಕರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅಷ್ಟೇ ಅಲ್ಲದೇ ಈ ಹಾಸ್ಟೆಲ್ ಇನ್ನು ಅನೇಕ ಸಮಸ್ಯೆಗಳ ಗೂಡಾಗಿದೆ ಎಂದು ಆರೋಪಿಸಿದ್ದಾರೆ. ಎಲ್ಲ ಸಮಸ್ಯೆಗಳನ್ನು ಕೂಡಲೇ ನಿವಾರಿಸುವಂತೆ ಒತ್ತಾಯಿಸಿ ಕುವೆಂಪು ವಿವಿ ಆಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಮೇಶ್, ಸುರೇಶ್, ವಿರೂಪಾಕ್ಷ, ರವಿ ಮುಂತಾದ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರಾದ ಚರಣ್, ಮಂಜುನಾಥ್, ಅಖಿಲೇಶ್, ಪೃಥ್ವಿ ಇನ್ನು ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement