ಬತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ: ಡಿಸಿ
ಸಾಗರ: ಉಪವಿಭಾಗದ ಸೊರಬ, ಹೊಸನಗರ, ಶಿಕಾರಿಪುರ ಹಾಗೂ ಸಾಗರದಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಹೇಳಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಭತ್ತ ಖರೀದಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾಗರ ಸೇರಿದಂತೆ ಪ್ರತಿ ತಾಲೂಕಿನಲ್ಲಿ ಸದ್ಯಕ್ಕೆ ಎರಡು ಕಡೆ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ ಹಾಗೂ ಆನಂದಪುರಂನಲ್ಲಿ ಖರೀದಿ ಕೇಂದ್ರ ಸ್ಥಾಪಿಸಿದ್ದು, ಬೇಡಿಕೆ ಹೆಚ್ಚು ಇದ್ದರೆ ಮತ್ತೊಂದು ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.
1600 ನಿಗದಿ: ರೈತರು ಭತ್ತ ಹಾಗೂ ಮೆಕ್ಕೆಜೋಳವನ್ನು ಖರೀದಿ ಕೇಂದ್ರಕ್ಕೆ ತರುವ ಮೂಲಕ ಉತ್ತಮ ಬೆಲೆ ಪಡೆದುಕೊಳ್ಳಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ರೈತರು ಕೇಂದ್ರಗಳಿಗೆ ಭತ್ತ ತಂದು ಹಾಕಬೇಕು. ಭತ್ತಕ್ಕೆ ಕ್ವಿಂಟಾಲಿಗೆ 1600 ಹಾಗೂ ಮೆಕ್ಕೆಜೋಳಕ್ಕೆ 1310 ನಿಗಧಿಗೊಳಿಸಲಾಗಿದೆ.
ರೈತರಿಗೆ ಒಂದು ವಾರದಲ್ಲಿ ಹಣ ಪಾವತಿ ಮಾಡಲಾಗುವುದು. ಭತ್ತ ಮಾರಾಟ ಮಾಡುವ ರೈತರು ತಹಸೀಲ್ದಾರ್ ಕಚೇರಿಯಿಂದ ದೃಢೀಕರಣ ಪತ್ರ, 2013-14ರ ಪಹಣಿ ಹಾಗೂ ಪಾಸ್ ಪೋರ್ಟ್ ಫೋಟೋ ಹೊಂದಿರುವ ಬ್ಯಾಂಕ್ ಪಾಸ್ ಪುಸ್ತಕ, ಐಎಫ್ಎಸ್ಸಿ ಕೋಡ್ ಹೊಂದಿರುವ ಚೆಕ್ಕನ್ನು ಖರೀದಿ ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಹೇಳಿದರು.
ರೈತರು ಪಹಣಿ ಇನ್ನಿತರ ದಾಖಲೆ ಪಡೆಯಲು ತಹಸೀಲ್ದಾರ್ ಕಚೇರಿಗೆ ಅಲೆಯಬೇಕಾಗಿಲ್ಲ. ಸ್ಥಳೀಯವಾಗಿಯೆ ನಾಡಕಚೇರಿಯಲ್ಲಿ 24 ಗಂಟೆಯೊಳಗೆ ಖರೀದಿ ಕೇಂದ್ರಕ್ಕೆ ಭತ್ತ ತರುವ ರೈತರಿಗೆ ದಾಖಲೆ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿರುವ ಹಾಗೂ ರೈತರಿಗೆ ಭತ್ತ ಹಾಕುವ ಸಂದರ್ಭದಲ್ಲಿ ನೀಡಬೇಕಾದ ದಾಖಲೆ ಕುರಿತು ಮಾಹಿತಿ ಒದಗಿಸಲು ಕರಪತ್ರ ಹಂಚಿಕೆ ಇನ್ನಿತರ ಜಾಗೃತಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ತಹಸೀಲ್ದಾರ್ ಸಾಜಿದ್ ಅಹ್ಮದ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್, ರೇಣುಕಸ್ವಾಮಿ ಹಾಜರಿದ್ದರು.