ಸರಗಳ್ಳನ ಹಿಡಿದ ಸಾರ್ವಜನಿಕರು
ಸಾಗರ: ಪಟ್ಟಣದ ವಿನೋಬಾ ನಗರದಲ್ಲಿ ಮಾಂಗಲ್ಯಸರವನ್ನು ಅಪಹರಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ವಿನೋಬಾ ನಗರದ ಫಾರೆಸ್ಟ್ ಡಿಪೋ ಬಳಿ ಪ್ರಕಾಶ್ ಎಂಬುವವರ ಪತ್ನಿ ಹೇಮಾವತಿ ಎಂಬುವವರು ಅಂಗಡಿಗೆ ಹೋಗಿ ದಿನಸಿ ಸಾಮಗ್ರಿ ತರುತ್ತಿರುವ ಸಂದರ್ಭದಲ್ಲಿ ಬೈಕಿನಲ್ಲಿ ವೇಗವಾಗಿ ಬಂದ ಚೂರಿಕಟ್ಟೆ ವಾಸಿ ಶಿವಕುಮಾರ್ ಎಂಬಾತ ಮಾಂಗಲ್ಯಸರವನ್ನು ಕಿತ್ತುಕೊಂಡು ಓಡಲು ಪ್ರಯತ್ನಿಸಿದ್ದಾನೆ.
ಆಗ ಹೇಮಾವತಿ ಅವರ ಮೂರು ವರ್ಷದ ಮಗ ತೇಜಸ್ ಎಂಬಾತ ಓಡಿ ಹೋಗಿ ಅಂಗಡಿ ಬಳಿ ನಿಂತಿದ್ದ ವಿನೋಬಾ ನಗರದ ಯುವಕರಿಗೆ ತಾಯಿಯ ಮಾಂಗಲ್ಯ ಸರ ಕಿತ್ತುಕೊಂಡು ಹೋಗುತ್ತಿರುವ ವಿಷಯ ತಿಳಿಸಿದ್ದಾನೆ. ತಕ್ಷಣ ಸಾರ್ವಜನಿಕರು ಶಿವಕುಮಾರನನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆಗ ಶಿವಕುಮಾರ್ ತನ್ನನ್ನು ಹಿಡಿಯಲು ಬಂದವರ ಮೇಲೆ ಹಲ್ಲೆ ನಡೆಸಿ, ಕಣ್ಣಿಗೆ ಕಾರದ ಪುಡಿ ಎರಚುವ ಪ್ರಯತ್ನ ನಡೆಸಿದ್ದಾನೆ. ಸಾರ್ವಜನಿಕರು ಶತಪ್ರಯತ್ನ ಮಾಡಿ ಆತ ನನ್ನು ಹಿಡಿದು ಪೇಟೆಠಾಣೆಗೆ ಒಪ್ಪಿಸಿದ್ದಾರೆ.