ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹರಿದ ಅಭಿನಂದನೆ 'ಸಾಗರ'

Lingaraj Badiger
Updated On : 5 Dec 2013, 10:52 am

ಕ.ಪ್ರ. ವಾರ್ತೆ, ಸಾಗರ, ಡಿ.4
ತಾಲೂಕಿನ ಸಾಹಿತ್ಯ ಕ್ಷೇತ್ರದಲ್ಲಿ ಡಿ.4 ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಇಲ್ಲಿನ ಸಾಹಿತಿ ಡಾ.ನಾ.ಡಿಸೋಜ ಅವರಿಗೆ ಮಡಿಕೇರಿಯಲ್ಲಿ ನಡೆಯುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಂತಹ ಅತ್ಯುನ್ನತ ಗೌರವ ದೊರಕಿರುವುದು ಸಾಗರದ ಹೆಮ್ಮೆ.
ಹಿಂದೆ ಹೆಗ್ಗೋಡಿನ ಕೆ.ವಿ. ಸುಬ್ಬಣ್ಣನವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಾಗ ಕೂಡ ಇಡೀ ಸಾಗರ ಸಂಭ್ರಮಿಸಿತ್ತು. ಇದೀಗ ಸಾಗರದ ಸಮಸ್ತ ನಾಗರಿಕರು ಡಿಸೋಜರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ದೊರಕಿರುವುದಕ್ಕೆ ಮತ್ತೆ ಸಂಭ್ರಮ ಪಡುವಂತಾಗಿದೆ.
ಜನಸಾಗರ: ಬುಧವಾರ ಮಧ್ಯಾಹ್ನ 12ರ ಸುಮಾರಿಗೆ ಡಿಸೋಜ ಹೆಸರು ಪ್ರಕಟಗೊಂಡಾಗ ನೆಹರೂ ನಗರದಲ್ಲಿರುವ ಅವರ ಮನೆ ಮುಂದೆ ಜನಸಾಗರ ಸೇರಿತ್ತು. ಊರಿನ ಗಣ್ಯರು, ನಾಗರಿಕರು, ಸಾಹಿತ್ಯಾಭಿಮಾನಿಗಳು, ನೆರೆಹೊರೆಯವರು ಡಿಸೋಜರಿಗೆ ಶುಭಾಶಯ ಹೇಳಿ ಸಂತಸಪಟ್ಟರು. ಇಡೀ ದಿನ ಅವರ ಮನೆ ಅಭಿಮಾನಿಗಳಿಂದ ತುಂಬಿಹೋಗಿತ್ತು.
ಜನಪರ ಸಾಹಿತಿ, ಹಲವು ಕತೆ, ಕಾದಂಬರಿ, ನಾಟಕ, ಮಕ್ಕಳ ಕವಿತೆ ಬರೆದಿರುವ ನಾ. ಡಿಸೋಜ ಒಬ್ಬ ಜನಪರ ಸಾಹಿತಿ. ಏಕೆಂದರೆ ಅವರ ಹೆಚ್ಚಿನ ಸಾಹಿತ್ಯ ಕೃತಿಗಳಲ್ಲಿ ಜನಪರ ಕಾಳಜಿ ವ್ಯಕ್ತವಾಗಿದೆ. ಮುಖ್ಯವಾಗಿ ಅಣೆಕಟ್ಟುಗಳ ನಿರ್ಮಾಣದಿಂದ ಮುಳುಗಡೆಯಾಗಿ ಸಂತ್ರಸ್ತರಾಗುವ ಜನರ ನೋವು, ಆತಂಕ, ಸಮಸ್ಯೆಗಳನ್ನು ಡಿಸೋಜ ಮುಳುಗಡೆ, ದ್ವೀಪ ಮುಂತಾದ ಕಾದಂಬರಿಗಳಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸುತ್ತಾರೆ.
ಜನಜಾಗೃತಿ: ಹಾಗೆಯೇ ಕೊಳೆ ರೋಗದಂತಹ ಕಾದಂಬರಿ ಬರೆದು ರೈತರ ಶೋಷಣೆ, ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ದಾರೆ. ಮಲೆನಾಡಿನಲ್ಲಿ ಗಣಿಗಾರಿಕೆ ನಡೆಯುತ್ತದೆ ಎನ್ನುವ ಸುದ್ದಿ ಬಂದಾಗ ಆ ನಿಟ್ಟಿನಲ್ಲಿ ಸಕ್ರಿಯ ಹೋರಾಟ ನಡೆಸುವ ಜೊತೆಗೆ ಬರವಣಿಗೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಇಕ್ಕೇರಿ ಸುತ್ತಮುತ್ತ ಗಣಿಗಾರಿಕೆ ನಡೆಯುತ್ತದೆ ಎಂದಾಗ ಬರೆದಿರುವ 'ಇಕ್ಕೇರಿ ಕೋಟೆಯ ಮೇಲೆ ವಿಮಾನ ಹಾರಿದ್ದು' ಬರವಣಿಗೆ ಗಣಿಗಾರಿಕೆಯ ಕರಾಳ ಮುಖವನ್ನು ಬೆತ್ತಲೆ ಮಾಡಿದೆ. ಅಲ್ಲದೆ ಪರಿಸರ ಸಂಬಂಧಿತ ಹೋರಾಟಗಳಲ್ಲಿ ಡಿಸೋಜ ಯಾವತ್ತೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಕೆರೆ ಉಳಿಕೆಗೆ ಹೋರಾಟ: ಪಟ್ಟಣದ ಐತಿಹಾಸಿಕ ಗಣಪತಿ ಕೆರೆಯನ್ನು ಉಳಿಸಿಬೇಕು ಎಂದು ಡಿಸೋಜ ಗಟ್ಟಿಧ್ವನಿಯಲ್ಲಿ ಹೇಳುತ್ತಾರೆ. ಹಾಗೆಯೇ ಸಾಮಾಜಿಕ ಕಳಕಳಿ ಹೋರಾಟದಲ್ಲಿಯೂ ಡಿಸೋಜ ತೊಡಗಿಸಿಕೊಂಡಿದ್ದಾರೆ. ಸಾಗರದಲ್ಲಿ ರೈಲು ಸಂಚಾರ ಮತ್ತೆ ಪ್ರಾರಂಭವಾಗಿರುವುದರಲ್ಲಿ ಡಿಸೋಜರ ಪಾತ್ರ ಅವಿಸ್ಮರಣೀಯ. ಬ್ರಾಡ್ಗೇಡ್ ರೇಲ್ವೆ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ನಡೆಸಿದ ಅವಿರತ ಹೋರಾಟದ ಫಲವಾಗಿ ಮಲೆನಾಡಿನ ಜನ ಮತ್ತೆರೈಲನ್ನು ನೋಡುವಂತಾಯಿತು.
ಹೀಗೆ ಸಾಹಿತಿಯಾಗಿ ಸಾಮಾಜಿಕ ಹೋರಾಟಗಾರರಾಗಿ, ಪರಿಸರ ಕಾಳಜಿ ಹೊಂದಿದವರಾಗಿರುವ ನಮ್ಮೂರಿನ ಡಾ.ನಾ.ಡಿಸೋಜ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಊರಿನ ಹಿರಿಮೆಗೆ ಮತ್ತೊಂದು ಗರಿ ತಂದುಕೊಟ್ಟಿದೆ.
ಅಭಿನಂದನೆ: ಡಿಸೋಜರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ದೊರಕಿರುವುದು ಸಾಗರವೂ ಸೇರದಂತೆ ಇಡೀ ಮಲೆನಾಡಿಗೆ ಸಂದ ಗೌರವ ಎಂದು ಪ್ರತಿಕ್ರಿಯಿಸಿದ ಲೇಖಕ ಹಾಗೂ ಡಿಸೋಜರ ಒಡನಾಡಿ ವಿಲಿಯಂ, ಮಲೆನಾಡಿನ ಎಲ್ಲ ಸಮಸ್ಯೆಗಳನ್ನು ಬಹಳ ಬೇಗನೆ ನಾಡಿನ ಮುಂದೆ ತೆರೆದಿಟ್ಟವರಲ್ಲಿ ಡಿಸೋಜ ಮೊದಲಿಗರು. ಮಲೆನಾಡಿನ ಸಮಸ್ಯೆಗಳನ್ನು ಡಿಸೋಜರವರಷ್ಟು ಸಮರ್ಥವಾಗಿ ಬಿಂಬಿಸಿದ ಸಾಹಿತಿ ಮತ್ತೊಬ್ಬರಿಲ್ಲ. ಮಲೆನಾಡಿನ ಜನಾಂಗೀಯ ಅಧ್ಯಯನ ಮಾಡಿ ಕೊಳಗದಂತಹ ಕಾದಂಬರಿ ಬರೆದಿದ್ದಾರೆ. ಅಂಥವರಿಗೆ ಹಿಂದೆಯೇ ಈ ಗೌರವ ಬರಬೇಕಿತ್ತು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement