ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

13ರಂದು ಗೀತಾ ಜಯಂತಿ

Lingaraj Badiger
Updated On : 6 Dec 2013, 11:30 am

ಶಿವಮೊಗ್ಗ: ಇಲ್ಲಿಯ ರವೀಂದ್ರ ನಗರದ ಪ್ರಸನ್ನ ಗಣಪತಿ(ಬಲಮುರಿ) ದೇವಸ್ಥಾನದಲ್ಲಿ ಡಿ.13ರಂದು ಗೀತಾ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಮದ್ ಭಗವದ್ಗೀತಾ ಅಭಿಯಾನ- ಕರ್ನಾಟಕ, ಶಿರಸಿಯ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಶ್ರೀ ಭಗವದ್ಗೀತಾ ಅಭಿಯಾನ ಪುನಶ್ಚೇತನ ಜಿಲ್ಲಾ ಸಮಿತಿ ಹಾಗೂ ಪ್ರಸನ್ನ ಗಣಪತಿ(ಬಲಮುರಿ)ದೇವಸ್ಥಾನದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಅಂದು ಬೆಳಗ್ಗೆ 8.30ರಿಂದ ಭಗವದ್ಗೀತಾ ಪಾರಾಯಣ, ಪೂಜಾದಿಗಳು ನಡೆಯುವವು. ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ. 29ರಂದು ಸ್ಪರ್ಧೆ- ಭಗವದ್ಗೀತಾ ಅಭಿಯಾನದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಭಗವದ್ಗೀತೆಯ 13ನೇ ಅಧ್ಯಾಯದ ಕಂಠಪಾಠ ಸ್ಪರ್ಧೆ, ಶ್ರೀಕೃಷ್ಣ ವೇಷ ಸ್ಪರ್ಧೆ, ಭಗವದ್ಗೀತಾ ವಿಷಯವಾಗಿ ಭಾಷಣ ಸ್ಪರ್ಧೆಗಳನ್ನು ಡಿ.29ರಂದು ಮಧ್ಯಾಹ್ನ 3 ಗಂಟೆಗೆ ಏರ್ಪಡಿಸಲಾಗಿದೆ. ಸ್ಪರ್ಧಾಳುಗಳು ತಮ್ಮ ಹೆಸರನ್ನು ಡಿ.25ರೊಳಗಾಗಿ ದೇವಸ್ಥಾನದ ಅರ್ಚಕ ಅ.ಪ. ರಾಮಭಟ್(08182- 276021) ಅವರಲ್ಲಿ ನೋಂದಾಯಿಸಬಹುದು ಎಂದು ಅಭಿಯಾನದ ಪ್ರಕಟಣೆ ತಿಳಿಸಿದೆ.
ಜೆರಾಕ್ಸ್ ಅಂಗಡಿ ಮಾಲೀಕರ ಸಭೆ
ಶಿವಮೊಗ್ಗ: ಛಾಯಾಪ್ರತಿ(ಜೆರಾಕ್ಸ್) ಮಾಲೀಕರ ಸಂಘದ ವತಿಯಿಂದ ಡಿ.7ರಂದು ಮಧ್ಯಾಹ್ನ 3 ಗಂಟೆಗೆ ನಗರದ ಮಥುರಾ ಪ್ಯಾರಾಡೈಸ್‌ನಲ್ಲಿ ಸಭೆ ಕರೆದಿದೆ. ಸಂಘದ ನೋಂದಣಿಯನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಯಲ್ಲಿ ಮಾಡಿಸಿದ್ದು, ಮುಂದಿನ ಕಾರ್ಯಚಟುವಟಿಕೆ ಹಾಗೂ ದರಪಟ್ಟಿಯನ್ನು ಸದಸ್ಯರಿಗೆ ನೀಡುವುದು ಹಾಗೂ ಸದಸ್ಯತ್ವದ ನೋಂದಣಿ ಮಾಡಿಸುವ ಉದ್ದೇಶದಿಂದ ಸಭೆ ಏರ್ಪಡಿಸಲಾಗಿದೆ. ಸಂಘದ ಅಧ್ಯಕ್ಷ ಡಿ.ಜಿ. ಚಂದ್ರಶೇಖರ್, ಗೌರವಾಧ್ಯಕ್ಷ ಎಸ್. ದತ್ತಾತ್ರಿ ಉಪಸ್ಥಿತರಿರುವರು. ಜಿಲ್ಲೆಯ ಎಲ್ಲಾ ಜೆರಾಕ್ಸ್ ಅಂಗಡಿ ಮಾಲೀಕರು ಸಭೆಗೆ ಆಗಮಿಸುವಂತೆ ಸಂಘದ ಕಾರ್ಯದರ್ಶಿ ಮಂಜಪ್ಪ ತಿಳಿಸಿದ್ದಾರೆ.
ರೇಖಿ ಶಿಬಿರ
ಸಾಗರ: ಇಲ್ಲಿನ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಹಾಗೂ ವಿಜ್ಞಾನ ಸ್ಟಡಿ ಸರ್ಕಲ್ ಆಶ್ರಯದಲ್ಲಿ ಡಿ.13, 14 ಮತ್ತು 15ರಂದು ಪಟ್ಟಣದ ಕಾನ್ಲೆ ಛತ್ರದಲ್ಲಿ ರೇಖಿ ಮತ್ತು ಪ್ರಾಣಿಕ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.  ಬೆಂಗಳೂರಿನ ವಿವೇಕಾನಂದ ಯೋಗ ಕೇಂದ್ರದ ಸಂಪತ್‌ಕುಮಾರ್ ಗುರೂಜಿಯವರು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಆಸಕ್ತರು ಗಜಾನನ ಮೋಟಾರ್ ಕಂಪನಿ ಪಕ್ಕದಲ್ಲಿರುವ ವಿಜ್ಞಾನ ಕಂಪ್ಯೂಟರ್ಸ್‌ನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ವಿವರಗಳಿಗೆ ವಿದ್ಯಾಧರ ಮೊ. 9449661667, ಧರ್ಮಣ್ಣ ಮೊ. 9449829374.

11ರಿಂದ ಕುಂಸಿಯಲ್ಲೂ ರೈಲು ನಿಲುಗಡೆ
ಶಿವಮೊಗ್ಗ: ಶಿವಮೊಗ್ಗ- ತಾಳಗುಪ್ಪ ನಡುವೆ ಸಂಚರಿಸುವ ರೈಲುಗಳು ಇನ್ನು ಮುಂದೆ ಕುಂಸಿ ನಿಲ್ದಾಣದಲ್ಲೂ ನಿಲುಗಡೆಯಾಗಲಿವೆ. ರೇಲ್ವೆ ಇಲಾಖೆ ತೀರ್ಮಾನ ಕೈಗೊಂಡಿದ್ದು, ಡಿ.11ರಿಂದ ಆದೇಶ ಜಾರಿಗೆ ಬರಲಿದೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ರೇಲ್ವೆ ಇಲಾಖೆಯ ಈ ನಿರ್ಧಾರದಿಂದ ಗ್ರಾಮೀಣ ಭಾಗದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.
ಹಿಂದಿದ್ದ ಮೀಟರ್ ಗೇಜ್ ವೇಳೆ ಕುಂಸಿ, ಹಾರ್ನಳ್ಳಿ, ಕೋಟೆ ಗಂಗೂರು ಸೇರಿದಂತೆ ಅನೇಕ ಹಳ್ಳಿಗಳಲ್ಲಿ ರೈಲು ನಿಂತು ಹೋಗುತ್ತಿದ್ದವು. ಬ್ರಾಡ್‌ಗೇಜ್‌ಗೆ ಬದಲಾವಣೆಯಾದ ನಂತರ ಈ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲದಾಯಿತು. ಬಸ್ ಪ್ರಯಾಣ ದರ ಹಾಗೂ ರೇಲ್ವೆ ಪ್ರಯಾಣ ದರದಲ್ಲಿ ಸಾಕಷ್ಟು ಅಂತರವಿರುವುದರಿಂದ ಬಡವರಿಗೆ ರೇಲ್ವೆ ಪ್ರಯಾಣ ಸಾಕಷ್ಟು ಅನಾನುಕೂಲವಾಗಿತ್ತು. ಹೀಗಾಗಿ ಹಾರ್ನಳ್ಳಿ, ಕುಂಸಿಯಲ್ಲಿ ರೈಲು ನಿಲ್ಲಬೇಕೆಂಬುದು ಜನರ ಬೇಡಿಕೆಯಾಗಿತ್ತು ಎಂದು ಆಯನೂರು ಮಂಜುನಾಥ್ ಹೇಳಿದರು.ಈ ಬೇಡಿಕೆಯನ್ನಿಟ್ಟುಕೊಂಡು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಲಾಗಿತ್ತು. ಸಚಿವರು ಪೂರಕವಾಗಿ ಸ್ಪಂದಿಸಿ, ಕುಂಸಿಯಲ್ಲಿ ರೈಲು ನಿಲುಗಡೆಗೆ ಸೂಚನೆ ನೀಡಿದರು ಎಂದು ತಿಳಿಸಿದ ಮಂಜುನಾಥ್, ಜನರ ಬೇಡಿಕೆ ಹಾಗೂ ನಮ್ಮ ಅಹವಾಲನ್ನು ಆಲಿಸಿ ಅವಕಾಶ ಮಾಡಿಕೊಟ್ಟ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಂದಾಳತ್ವ ವಹಿಸಿದ ಕಾಗೋಡು ತಿಮ್ಮಪ್ಪನವರನ್ನು ಅಭಿನಂದಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement