ಗ್ರಾಮೀಣ ಕ್ರೀಡೆ ನೇಪಥ್ಯಕ್ಕೆ ವಲಸೆ ಕಾರಣ: ಸುನೀತಾ
ಜೋಗ್ಫಾಲ್ಸ್: ಉದ್ಯೋಗಕ್ಕಾಗಿ ಹಳ್ಳಿಗಳ ಜನರು ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಕ್ರೀಡೆಗಳು ನೇಪಥ್ಯಕ್ಕೆ ಸರಿಯುವಂತಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಗ್ರಾಮೀಣ ಕ್ರೀಡೆಗಳನ್ನು ಉಳಿಸುವತ್ತ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ ಎಂದು ಸಾಗರ ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ ತಿಳಿಸಿದರು.
ಸಮೀಪದ ಅರಳಗೋಡಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಅರಳಗೋಡು ಮತ್ತು ಬಿದರೂರು ಕಾರ್ಯ ಕ್ಷೇತ್ರದ ವಾರ್ಷಿಕೋತ್ಸವ ಮತ್ತು ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರಳಗೋಡು ಗ್ರಾ.ಪಂ. ಅಧ್ಯಕ್ಷ ಲಕ್ಷಪತಿ, ತಾಳಗುಪ್ಪ ವಲಯದ ಅಧ್ಯಕ್ಷ ವೀರರಾಜ್ ಜೈನ್, ತಾಳಗುಪ್ಪ ವಲಯದ ಮೇಲ್ವಿಚಾರಕ ಪ್ರಶಾಂತ್, ಮಾಜಿ ತಾ.ಪಂ. ಸದಸ್ಯ ಎಂ.ಪಿ. ಲೋಕರಾಜ್, ಪರಿಸರವಾದಿ ಅರಳಗೋಡು ಮಹಾಬಲಗಿರಿ ಹಾಜರಿದ್ದರು.
ಲತಾ ಪ್ರಾರ್ಥಿಸಿ, ದಿನೇಶ್ ಸ್ವಾಗತಿಸಿದರು. ಅರಳಗೋಡು ಸೇವಾನಿರತ ವಸಂತ್ ನಿರೂಪಿಸಿ, ಶಾಂತರಾಜ್ ವಂದಿಸಿದರು.