ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಎಸ್‌ವೈ ವಾಪಸ್‌ಗೆ ಯಾರ ತಕರಾರಿಲ್ಲ

Lingaraj Badiger
Updated On : 6 Dec 2013, 11:28 am

ಶಿವಮೊಗ್ಗ: ಬಿಎಸ್‌ವೈ ಪಕ್ಷಕ್ಕೆ ವಾಪಸಾಗುವ ವಿಚಾರದಲ್ಲಿ ರಾಜ್ಯದ ನಾಯಕರಿಂದ ಯಾವುದೇ ತಕರಾರಿಲ್ಲ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಯಾರೂ ಅನಿವಾರ್ಯವಲ್ಲ. ಆದರೆ, ಪರಸ್ಪರ ಪೂರಕ ಎಂದರು. ಪಕ್ಷದಿಂದ ಬೆಳೆದಂತಹ, ಪಕ್ಷವನ್ನು ಬೆಳೆಸಿದಂತಹ ನಾಯಕ ಯಡಿಯೂರಪ್ಪ.
ಪಕ್ಷದಿಂದ ಹೊರಹೋಗಿರುವ ಯಡಿಯೂರಪ್ಪನವರಿಗೂ ಬಿಜೆಪಿ ಅನಿವಾರ್ಯ. ಇಬ್ಬರ ಸಮ್ಮಿಲನದಿಂದ ಪಕ್ಷಕ್ಕೆ, ರಾಜಕಾರಣಕ್ಕೆ ಶಕ್ತಿ ಬರುತ್ತದೆ. ಈ ಸಂದರ್ಭದಲ್ಲಿ ಯಾರು, ಯಾರಿಗೆ ಅನಿವಾರ್ಯ ಎಂಬುದಕ್ಕಿಂತ ಪೂರಕ ಎಂಬುದೇ ಮುಖ್ಯ ಎಂದು ಹೇಳಿದರು.
ಬಿಎಸ್‌ವೈ ಆಗಮನ ಏಕೆ ತಡವಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಆಯನೂರು ಮಂಜುನಾಥ್,
ಸಾಂದರ್ಭಿಕವಾಗಿ ಕಾಲ ಪಕ್ವವಾಗಬೇಕಾಗುತ್ತದೆ. ನಮ್ಮ ರಾಷ್ಟ್ರೀಯ ನಾಯಕರು ಉತ್ತರ ಭಾರತದ ಚುನಾವಣೆಯ ಬಗ್ಗೆ ಹೆಚ್ಚು ಗಮನ ಇಟ್ಟಿದ್ದರು. ಸದ್ಯವೇ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐದು ರಾಜ್ಯಗಳ ಚುನಾವಣೆಯ ಫಲಿತಾಂಶಗಳು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀಳುತ್ತದೆ.
ಹೀಗಾಗಿ ರಾಷ್ಟ್ರೀಯ ನಾಯಕರು ವಿಧಾನಸಭಾ ಚುನಾವಣೆಗೆ ಗಮನ ಕೊಟ್ಟಿದ್ದರು. ಇದೀಗ ಗುರುತರವಾದಂತಹ ಒತ್ತಡ ಇಲ್ಲ. ಈಗ ಆಲೋಚಿಸುವ, ಚರ್ಚಿಸುವ ಸಮಯ ಬಂದಿದೆ ಎಂಬುದು ನನ್ನ ಭಾವನೆ ಎಂದರು.
ಬಿಎಸ್‌ವೈ ಮೇಲಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಆಯನೂರು, ಬಿಎಸ್‌ವೈ ಬೇಕು, ಅವರ ಮೇಲಿನ ಆರೋಪ ಬೇಡ ಎಂದು ಹೇಳೋದು ಸರಿಯಲ್ಲ. ಅವರ ಮೇಲೆ ಏನೇ ಆರೋಪ ಇದ್ದರೂ ಅವರೊಂದಿಗೆ ಪಕ್ಷ ಒಟ್ಟಾಗಿ ಇರುತ್ತದೆ. ಬಿಎಸ್‌ವೈ ಆಗಮನಕ್ಕೆ ಯಾವುದೇ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆ: ಯಾರು ಬಿಜೆಪಿ ಅಭ್ಯರ್ಥಿ?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರು ಅಭ್ಯರ್ಥಿಯಾಗಬೇಕೆಂಬುದನ್ನು ಪಕ್ಷದ ರಾಜ್ಯ-ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಜಿಲ್ಲಾ ಬಿಜೆಪಿಯು ಐದು ಹೆಸರನ್ನು ಶಿಫಾರಸು ಮಾಡಿದೆ. ಕೆ.ಎಸ್. ಈಶ್ವರಪ್ಪ, ನಾನು(ಆಯನೂರು ಮಂಜುನಾಥ್), ಎಂ.ಬಿ. ಭಾನುಪ್ರಕಾಶ್, ಸಿದ್ದರಾಮಣ್ಣ, ಆರಗ ಜ್ಞಾನೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.
ಪ್ರಸ್ತಾಪವಾಗಿರುವ ಐವರು ಜಿಲ್ಲೆಯ ಜನರಿಗೆ ಗೊತ್ತಿರುವ ಹೆಸರು. ನಾನೂ ಕೂಡ ಆಕಾಂಕ್ಷಿ. ಆದರೆ, ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತದೋ ಅವರ ಪರವಾಗಿ ಉಳಿದವರು ತಾವೇ ಅಭ್ಯರ್ಥಿ ಎಂದುಕೊಂಡು ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ ಎಂದರು.
ಬಿ.ವೈ. ರಾಘವೇಂದ್ರ ಅವರು ಬಿಜೆಪಿಯಿಂದಲೇ ಕಣಕ್ಕಿಳಿಯುವ ಕುರಿತು ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಆಯನೂರು ಮಂಜುನಾಥ್, ಈ ಗೊಂದಲ ಇದೆ. ಕೆಜೆಪಿ-ಬಿಜೆಪಿ ವಿಲೀನವಾದ ನಂತರ ಅವರ ಹೆಸರನ್ನು ಸೇರಿಕೊಂಡಂತೆ ಆಯ್ಕೆ ಸಂದರ್ಭದಲ್ಲಿ ಆರು ಹೆಸರು ಚರ್ಚೆಗೆ ಬರಬಹುದು. ಯಾರು ಸೂಕ್ತವೋ ಅವರನ್ನು ಪಕ್ಷ ಆಯ್ಕೆ ಮಾಡುತ್ತದೆ ಎಂದು ಹೇಳಿದರು.
ಚುನಾವಣಾ ಕಣ ಆಧರಿಸಿ, ಎದುರಾಳಿಯ ಶಕ್ತಿ ಸಾಮರ್ಥ್ಯ ಗಮನಿಸಿ ಸೂಕ್ತ ಅಭ್ಯರ್ಥಿಯನ್ನು ಪಕ್ಷ ಹೂಡುತ್ತದೆ. ಈ ಕ್ಷೇತ್ರದಿಂದ ಗೆಲ್ಲುವುದು ಹಾಗೂ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದೇ ಅಂತಿಮ ಗುರಿಯಾಗಿರುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement