ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

10ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ

Vishwanath S
Updated On : 7 Dec 2013, 11:16 am

ಕ.ಪ್ರ. ವಾರ್ತೆ ,  ಶಿವಮೊಗ್ಗ ,  ಡಿ.6
ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಡಿ.10ರಂದು ನಗರದ ಸೈನ್ಸ್ ಮೈದಾನದಲ್ಲಿ ಆಯೋಜನೆಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ. ದಿನೇಶ್, ಮೂಡುಬಿದಿರೆಯ ಪ್ರತಿಭಾವಂತ 240 ವಿದ್ಯಾರ್ಥಿಗಳು ಕಾರ್ಯಕ್ರಮ ಪ್ರಸ್ತುತಪಡಿಸುತ್ತಿದ್ದಾರೆ. ಪ್ರವೇಶ ಉಚಿತವಾಗಿದ್ದು, 10 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.
ಏನೆಲ್ಲಾ ಕಾರ್ಯಕ್ರಮ? ಮೋಹಿನಿಯಾಟ್ಟಂ ಗಣೇಶ ವಂದನ, ಆಂಧ್ರದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಭರತನಾಟ್ಯ- ರಂಜನಿ ಮಾಲಾ, ಮಹಾರಾಷ್ಟ್ರದ ಲಾವಣಿ ನೃತ್ಯ, ಮಣಿಪುರಿ ದೋಲ್ ಚಲಂ ಮತ್ತು ಪುಂಗ್ ಚಲಂ, ಬಡಗು ಯಕ್ಷ ಪ್ರಯೋಗ- ಶೃಂಗಾರ ವೈಭವ, ಒಡಿಸ್ಸಿ ಶಾಸ್ತ್ರೀಯ ನೃತ್ಯ, ಒರಿಸ್ಸಾದ ಜಾನಪದ ಗೋಟಿಪೂವ, ಕಂಟೆಂಪರರಿ ನೃತ್ಯ ಆಂಗಿಕಂ ಮತ್ತು ವಂದೇಮಾತರಂ, ಕೇರಳದ ಸೆಮಿಕ್ಲಾಸಿಕ್ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ತೆಂಕು ಯಕ್ಷಗಾನ ಪ್ರಯೋಗ- ಗೋವರ್ಧನ ಗಿರಿ, ಕಥಕ್- ನವರಂಗ್ ಹಾಗೂ ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹನದ ಬೇಟೆ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 5.45ಕ್ಕೆ ಸರಿಯಾಗಿ ಆರಂಭವಾಗಲಿದ್ದು, ವಾಹನ ಪಾರ್ಕಿಂಗ್‌ಗೆ ಪದವಿ ಕಾಲೇಜು, ಪ್ರೌಢಶಾಲೆ ಆವರಣದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಉದ್ಘಾಟನೆ: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಲಿದ್ದು, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯನಾಯ್ಕ, ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಉಪಸ್ಥಿತರಿರುವರು.
ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಮಾತನಾಡಿ, ವಿಶ್ವ ನುಡಿಸಿರಿ ವಿರಾಸತ್ ಸಮ್ಮೇಳನದ ಪೂರ್ವಭಾವಿಯಾಗಿ ಈ ಸಾಂಸ್ಕೃತಿಕ ವೈಭವ ನಡೆಯುತ್ತಿದೆ. ರಾಜ್ಯದ 65 ಕಡೆಗಳಲ್ಲಿರುವ ಜಿಲ್ಲಾ ಘಟಕಗಳಿಂದ ಈ ರೀತಿಯ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡಬಿದಿರೆ ವಿದ್ಯಾಗಿರಿಯಲ್ಲಿ ಡಿ.19ರಿಂದ 22ರ ವರೆಗೆ ನಡೆಯಲಿರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್- 2013 ವಿಶ್ವ ಸಮ್ಮೇಳನದಲ್ಲಿ ದೇಶ ವಿದೇಶಗಳ 40,000 ಪ್ರತಿನಿಧಿಗಳು ಹಾಗೂ 10 ಲಕ್ಷ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಕೃಷಿ ಮತ್ತು ಜಾನಪದಕ್ಕೆ ವಿಶೇಷ ಒತ್ತು ನೀಡಿ ನಾಡು ನುಡಿಯನ್ನು ಪ್ರತಿಬಿಂಬಿಸುವ ಹಲವು ಪ್ರದರ್ಶನಗಳನ್ನು ಏರ್ಪಡಿಸಲಾಗುವುದು. ಕನ್ನಡ ಸಂಸ್ಕೃತಿ ಗ್ರಾಮ, 1,000ಕ್ಕೂ ಅಧಿಕ ಚಿತ್ರ ಕಲಾವಿದರು ಭಾಗವಹಿಸುವ ಆಳ್ವಾಸ್ ಚಿತ್ರಸಿರಿ, ಅಮೂಲ್ಯ ಪುಸ್ತಕಗಳ ಸಂಗ್ರಹವನ್ನೊಳಗೊಂಡ ಪುಸ್ತಕ ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಆಹಾರೋತ್ಸವ, ಬೃಹತ್ ಪುಸ್ತಕ ಮಾರಾಟ ವ್ಯವಸ್ಥೆ ಇತ್ಯಾದಿಗಳು ಸಮ್ಮೇಳನದ ಆಕರ್ಷಣೆಯಾಗಲಿವೆ.
4 ವೇದಿಕೆಗಳಲ್ಲಿ ಚಿಂತನೆ, 10 ವೇದಿಕೆಗಳಲ್ಲಿ ಸಾಂಸ್ಕೃತಿಕ ವೈಭವ ನಡೆಯುವುದು. ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನಲ್ಲಿ ಮುಖ್ಯವೇದಿಕೆಯ ಹೊರತಾಗಿ 3 ಪರ್ಯಾಯ ವೇದಿಕೆಗಳಿರಲಿದ್ದು, ಇಲ್ಲಿ ಕೃಷಿ, ಜಾನಪದ ಮತ್ತು ವಿದ್ಯಾರ್ಥಿ ಚಿಂತನ ಕಾರ್ಯಕ್ರಮಗಳು ನಡೆಯುವುದು. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸುವ ವಿರಾಸತ್‌ನ ಮುಖ್ಯ ವೇದಿಕೆಯಲ್ಲದೆ ಇತರ 10 ವೇದಿಕೆಗಳಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯುವುದು.
ಯಕ್ಷಗಾನ, ನಾಟಕ, ಜಾನಪದ, ನೃತ್ಯ, ಸಂಗೀತ, ಬಾಲ ಪ್ರತಿಭೆ ಮೊದಲಾದ ವಿವಿಧ ಕಲಾಪ್ರಕಾರಗಳಲ್ಲಿ ಕಾರ್ಯಕ್ರಮ ಪ್ರದರ್ಶನ ಕಾಣಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಪ್ರಸನ್ನಕುಮಾರ್, ಪ್ರೊ. ರವಿ, ಉಪನ್ಯಾಸಕ ಕುಂದನ್ ಬಸವರಾಜ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement