ಅಂಬೇಡ್ಕರ್ ಮಾನವತೆ ಮೇರು ಪರ್ವತ: ಗುರುರಾಜ
ಸೊರಬ: ಭಾರತೀಯ ಸಂಸ್ಕೃತಿಯಲ್ಲಿ ಸಮಾನತೆ, ಸಹೋದರ ಭಾವಗಳ ಆಧಾರದ ಮೇಲೆ ನವೀನತೆಯನ್ನುಂಟು ಮಾಡಿದ ಮಹಾನ್ ಚೇತನ ಅಂಬೇಡ್ಕರ್ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಗುರುರಾಜ ನುಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 57ನೇ ಪರಿನಿರ್ವಾಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕವಾಗಿ ಹಿಂದುಳಿದ, ಶಿಕ್ಷಣದಿಂದ ವಂಚಿತರಾಗಿ ಆಧುನೀಕರಣ ಮತ್ತು ಜಾಗತೀಕರಣಗಳ ಸವಾಲಿನಲ್ಲಿ ಜೀವಂತ ಶವಗಳಾಗಿ ಬದುಕು ತಳ್ಳುತ್ತಿರುವ ದೀನ ದಲಿತರ ಬಾಳಿಗೆ ಬೆಳಕನ್ನು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಮಾನವತೆಯ ಮೇರು ಪರ್ವತ. ಸ್ವಸಾಮರ್ಥ್ಯದಲ್ಲಿ ದೃಢವಿಶ್ವಾಸ, ವಿವೇಚನಾಪೂರ್ಣ ನಿರ್ಧಾರ ಸ್ವಾವಲಂಬನೆ ಮುಂತಾದ ತತ್ವಗಳ ಮೇಲೆ ಹೊಸ ಸಮಾಜವನ್ನು ನಿರ್ಮಾಣ ಮಾಡುವ ಕನಸು ಕಂಡವರು. ರಾಜಕೀಯವು ಕೆಲವರ ಸ್ವಾಮ್ಯದಲ್ಲಿ ಇರುವಂತಾಗಬಾರದು. ಪ್ರಜಾಪ್ರಭುತ್ವದಲ್ಲಿ ಸರ್ವರೂ ಸಮಾನರೇ ಆಗಿರುವಾಗ ಕೆಲವರು ಹಲವರನ್ನು ಆಳುವುದೂ ಸಹಾ ಅರ್ಥಹೀನವಾದದ್ದು ಎಂದು ತಿಳಿದು ಅದನ್ನೇ ಸಂವಿಧಾನದಲ್ಲಿ ಸಮನ್ವಯಗೊಳಿಸಿದವರು ಎಂದರು.
ಪತ್ರಕರ್ತ ಜಿ. ಕೆರಿಯಪ್ಪ ಮಾತನಾಡಿ, ಜನರ ಮನಸ್ಸು ಪರಿವರ್ತಿತವಾದರೆ ಸಮಾಜದಲ್ಲಿ ತಾವಾಗಿಯೇ ಸಹಬಾಳ್ವೆ ಸಹಭೋಜನ ನಡೆಸುವರು. ಹೊಸ ತಲೆಮಾರಿನವರು ತಾವಾಗಿಯೇ ಜಾತಿಯ ದಾಸ್ಯದಿಂದ ದೂರವಾಗಿ ಹೊಸ ಸಮಾಜವನ್ನು ಸೃಷ್ಟಿ ಮಾಡುವ ಸಂಕಲ್ಪದಿಂದ ಮುನ್ನೆಡೆದರೆ ಮೇಲು-ಕೀಳು ಎಂಬ ಭಾವನೆ ಉದ್ಬವಿಸುವುದಿಲ್ಲ ಎಂದ ಅವರು, ಯಾವುದೇ ಹೋರಾಟವಿರಲಿ ಅವು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರಬೇಕು. ಅಹಿಂಸೆಯಿಂದ ಕೂಡಿರಬೇಕೆಂದು ಹಲವು ಚಳವಳಿಗಳನ್ನು ನಡೆಸಿದ ಅಂಬೇಡ್ಕರ್ ಈಗಿನ ಚಳವಳಿಗಾರರಿಗೆ ಮಾದರಿಯಾಗಿದ್ದಾರೆ ಎಂದರು.
ತಾಲೂಕು ಸಂಚಾಲಕ ಬಿ. ಬಂಗಾರಪ್ಪ ನಿಟ್ಟಕ್ಕಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಡಿ.ಬಿ. ಶುಭಾಕರ, ಪ್ರಕಾಶ್ ಮಲ್ಲಾಪುರ, ಡಿ.ಎಚ್. ರೇವಪ್ಪ, ಕೆ.ಕೆ. ನಾಗರಾಜ ಕಾಸರಗುಪ್ಪೆ, ಜಿ.ಸಿ. ನಾಗರಾಜ, ರುದ್ರಪ್ಪ ಬೈರೇಕೊಪ್ಪ, ಮಹೇಶ್ ಶಕುನವಳ್ಳಿ, ಪರಮೇಶ್ವರಪ್ಪ ಕೋಲ್ಗುಣಸಿ, ಚಂದ್ರಪ್ಪ ತುಡ್ನೂರು, ವೀರಭದ್ರಪ್ಪ ತಾಳಗುಪ್ಪ, ಎ.ಡಿ. ನಾಗಪ್ಪ ಇದ್ದರು.