ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಯೋಧ್ಯೆಯಲ್ಲೇ ಮಂದಿರ ನಿರ್ಮಾಣ

Vishwanath S
Updated On : 7 Dec 2013, 11:17 am

ಕ.ಪ್ರ.ವಾರ್ತೆ , ಶಿವಮೊಗ್ಗ ,  ಡಿ.6
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಾಧು- ಸಂತರು ಸಂಕಲ್ಪ ಮಾಡಿದ್ದು, ಎಷ್ಟೇ ಅಡೆತಡೆ ಬಂದರೂ ಮಂದಿರ ನಿರ್ಮಾಣ ಶತಸಿದ್ಧ ಎಂದು ಬಜರಂಗದಳ ಸಂಚಾಲಕ ದೀನದಯಾಳು ತಿಳಿಸಿದರು.
ಶನಿವಾರ ರಾತ್ರಿ ವಿಶ್ವ ಹಿಂದೂ ಪರಿಷತ್ ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ಹಿಂದೂ ವಿಜಯೋತ್ಸವ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುಗಳು ಒಟ್ಟಾದರೆ ಏನಾಗುತ್ತದೆ ಎಂಬುದಕ್ಕೆ ಅನೇಕ ಉದಾಹರಣೆ ಕಣ್ಣಮುಂದೆ ಇದೆ. ಹೀಗಿರುವಾಗ ಎಲ್ಲರೂ ಮಂದಿರ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಬೇಕು. ಬಹುಸಂಖ್ಯಾತರ ಭಾವನೆಗೆ ಬೆಲೆ ಕೊಡಬೇಕು. ಸಹಕಾರ ನೀಡದೇ ಹೋದರೆ ಮೆಟ್ಟಿನಿಂತು ಮಂದಿರ ನಿರ್ಮಾಣವಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಬಹುಸಂಖ್ಯಾತ ಹಿಂದುಗಳ ಭಾವನೆ ಗೌರವಿಸದೆ ಅಲ್ಪಸಂಖ್ಯಾತರ ರಕ್ಷಣೆ ಹೆಸರಿನಲ್ಲಿ ಅನಗತ್ಯ ಕಾನೂನು ತರಲು ಹೊರಟಿದೆ. ಇದನ್ನು ಎಲ್ಲರೂ ವಿರೋಧಿಸಬೇಕಾಗಿದೆ ಎಂದ ಅವರು, ರಾಜ್ಯ ಸರ್ಕಾರ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೆ ತರುವ ನೆಪದಲ್ಲಿ ಹಿಂದೂಗಳ ನಂಬಿಕೆ ಧ್ವಂಸ ಮಾಡಲು ಹೊರಟಿದೆ. ಮೂಢನಂಬಿಕೆ ಮಟ್ಟ ಹಾಕುವ ಪ್ರಯತ್ನಕ್ಕೆ ನಮ್ಮ ಸಹಕಾರವಿದೆ. ಆದರೆ, ಹಿಂದುಗಳ ನಂಬಿಕೆ, ಭಾವನೆಗೆ ಧಕ್ಕೆಯಾಗುವಂತಹ ಕಾನೂನು ತರಲು ಹೊರಟರೆ ಸುಮ್ಮನೆ ಕೂರುವುದಿಲ್ಲ ಎಂದರು.
ನಮ್ಮ ದೇವಸ್ಥಾನದ ಹಣದಲ್ಲಿ ಇವರು ಶಾದಿ ಭಾಗ್ಯ ಯೋಜನೆ ತರುವ ಔಚಿತ್ಯವಾದರೂ ಏನು, ತಾಕತ್ತಿದ್ದರೆ ಮಸೀದಿಗಳಿಂದ ಹಣ ಸಂಗ್ರಹಿಸಲಿ ನೋಡೋಣ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ದೀನದಯಾಳು, ಇಸ್ಲಾಮಿಕ್ ವಿಶ್ವವಿದ್ಯಾಲಯವನ್ನು ರಾಜ್ಯದಲ್ಲಿ ಆರಂಭಿಸುವ ಮೂಲಕ ಸರ್ಕಾರ ಏನು ಮಾಡಲು ಹೊರಟಿದೆ ಎಂದು ಟೀಕಿಸಿದರು.
ಬಾಂಬ್ ಸಂಸ್ಕೃತಿ ಶಿವಮೊಗ್ಗಕ್ಕೂ ಕಾಲಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಇಬ್ಬರು ಯುವಕರು ಪೊಲೀಸರ ವಶವಾಗಿದ್ದಾರೆ. ಇಲ್ಲಿನ ಯುವಕರ ನೆಟ್‌ವರ್ಕ್ ಕಾಶ್ಮೀರ, ಪಾಕಿಸ್ತಾನ, ಅಪಘಾನಿಸ್ತಾನವನ್ನೂ ಮುಟ್ಟಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಶಿವಮೊಗ್ಗ ಶಿವಮೊಗ್ಗವಾಗಿ ಉಳಿಯುವುದಿಲ್ಲ.
ಶಿವಮೊಗ್ಗ ನಗರದೊಳಗೆ 55ಕ್ಕೂ ಹೆಚ್ಚು ಕಸಾಯಿಖಾನೆಗಳು ಕಾರ್ಯಾಚರಣೆ ಮಾಡುತ್ತಿವೆ. ದಿನನಿತ್ಯ ನೂರಾರು ಗೋವುಗಳನ್ನು ಹತ್ಯೆ ಮಾಡಲಾಗುತ್ತದೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಲಾಗದು. ಪ್ರತಿರೋಧ ಅನಿವಾರ್ಯ ಎಂದು ತಿಳಿಸಿದರು.
ರಮೇಶ್‌ಬಾಬು, ನಟರಾಜ್ ಮತ್ತಿತರರು ಇದ್ದರು. ಇದೇ ವೇಳೆ ರಾಮಮಂದಿರ ನಿರ್ಮಾಣದ ಸಂಕಲ್ಪ ಮಾಡಲಾಯಿತು.
ಬಾಬ್ರಿ ಮಸೀದಿ ಧ್ವಂಸ ಖಂಡಿಸಿ ಪ್ರತಿಭಟನೆ
ಶಿವಮೊಗ್ಗ: ಬಾಬ್ರಿ ಮಸೀದಿ ಧ್ವಂಸ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪಾಫ್ಯುಲರ್‌ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
1992ರ ಡಿಸೆಂಬರ್ 6ರಂದು ಹಿಂದುತ್ವ ಫ್ಯಾಸಿಸ್ಟ್ ಶಕ್ತಿಗಳು ಆಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದಾರೆ. ಈ ಮೂಲಕ ಭಾರತದ ಆದರ್ಶ ಮತ್ತು ಮೌಲ್ಯಗಳನ್ನು ಧ್ವಂಸ ಮಾಡಿದ್ದಾರೆ ಎಂದರು.
ಇದು ಮುಸೀದಿಯೊಂದರ ಧ್ವಂಸವಲ್ಲ. ಮುಸ್ಲಿಂ ಸಮುದಾಯಕ್ಕೆ ಪಾಠ ಕಲಿಸಬೇಕೆಂಬ ಅಜೆಂಡ ಹೊಂದಿದ ಸಂಘ ಪರಿಹಾರದ ಕೃತ್ಯ. ಆದರಿಂದ ಈ ಘಟನೆಗೆ ಕಾರಣರಾದ ಆರ್‌ಎಸ್‌ಎಸ್, ವಿಎಚ್‌ಪಿ, ಬಿಜೆಪಿ ನಾಯಕರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಹೀದ್ ಖಾನ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement