ಇಂದು ಜ್ಞಾನ-ವಿಜ್ಞಾನ- ಸೃಜನಶೀಲ ದಿನಾಚರಣೆ
ಶಿವಮೊಗ್ಗ: ಇಂದಿನ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಡಿ.8ರಂದು ಜ್ಞಾನ-ವಿಜ್ಞಾನ- ಸೃಜನಶೀಲ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಿ.ಎಂ. ವೆಂಕಟರಮಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವ ಉದ್ದೇಶದಿಂದ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಪ್ರಾಯೋಗಿಕ ಶಿಕ್ಷಣದ ಅಳವಡಿಕೆಯನ್ನು ಜಾರಿಗೆ ತರಲಾಗಿದೆ. ಇಂದಿನ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಮರ, ಎಲೆ, ಕಾಂಡ, ರಕ್ತ, ಪರಿಚಲನೆ ಎಂದು ಅಕ್ಷರ ರೂಪದಲ್ಲಿ ಹೇಳುತ್ತೇವೆ ಹೊರತು ತೋರಿಸುವುದಿಲ್ಲ. ಇವುಗಳ ಪ್ರಕ್ರಿಯೆಯನ್ನು ಮಕ್ಕಳು ಸ್ವತ- ವೀಕ್ಷಣೆ ಮಾಡಲಿ ಎನ್ನುವ ಕಾರಣಕ್ಕೆ ಪ್ರತಿ ವರ್ಷ ಜ್ಞಾನ ವಿಜ್ಞಾನ ವಸ್ತುಪ್ರದರ್ಶನ ಮಾಡುತ್ತಿದ್ದೇವೆ ಎಂದರು.
3 ಸಾವಿರ ಮಾದರಿ: ಮಕ್ಕಳೇ ಪ್ರಯೋಗ ಮಾಡಿ, ಅದರ ವಿವರಣೆ ನೀಡಿ ಪ್ರದರ್ಶನ ಮಾಡುವ ಎಲ್ಲಾ ಜವಾಬ್ದಾರಿಯನ್ನು ಮಕ್ಕಳಿಗೆ ಕೊಟ್ಟಿರುತ್ತೇವೆ. ಇದು ವೈಜ್ಞಾನಿಕ ಚಿಂತನೆ ಬೆಳೆಸಲು ಸಾಧ್ಯವಾಗಿದೆ. ಪ್ರದರ್ಶನದಲ್ಲಿ ವಿಜ್ಞಾನ, ಗಣಿತ, ಇಂಗ್ಲಿಷ್, ಕನ್ನಡ ಹೀಗೆ ಪ್ರತಿ ವಿಷಯದಲ್ಲೂ ಪ್ರಾಯೋಗಿಕ ಮಾದರಿಗಳನ್ನು ಮಕ್ಕಳೇ ಸ್ವತ- ಮಾಡುತ್ತಾರೆ. ಸಾವಿರ ವಿದ್ಯಾರ್ಥಿಗಳು 3 ಸಾವಿರ ಪ್ರಾಯೋಗಿಕ ಮಾದರಿಗಳನ್ನು ಪ್ರದರ್ಶಿಸುವುದು ವಿಶೇಷ ಎಂದು ತಿಳಿಸಿದರು.
ಡಿ.8ರಂದು ಬೆಳಿಗ್ಗೆ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್. ಕೃಷ್ಣಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಬಿಇಒ ಹಾಲಾನಾಯ್ಕ, ಡಾ. ಗೌಡ ಉಪಸ್ಥಿತರಿರುವರು. ಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.