ಜನರಿಗೆ ಸತ್ಯಕಥೆ ತಲುಪಿಸಿ: ಡಾ. ಶಿಮುಶ
ಕ.ಪ್ರ. ವಾರ್ತೆ , ಶಿರಾಳಕೊಪ್ಪ , ಡಿ.6
ಶರಣ-ಶರಣೆಯರು ಸಾಧನೆ ಮಾಡಿರುವ ಸ್ಥಳದ ಇತಿಹಾಸ, ಮಹಿಮೆ ಬಗ್ಗೆ ಹಾಗೂ ಆಯಾ ಸ್ಥಳದಲ್ಲಿ ನಡೆದಿರುವ ಸತ್ಯಕಥೆಗಳನ್ನು ಜನರಿಗೆ ಮುಟ್ಟಿಸಿದರೆ ಸಾಕು ಜನರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಾರೆ ಎಂದು ಚಿತ್ರದುರ್ಗ ಮುರಾಘಮಠದ ಡಾ. ಶಿವಮೂರ್ತಿ ಮುರಘ ರಾಜೇಂದ್ರ ಶರಣರು ತಿಳಿಸಿದರು.
ಬುಧವಾರ ಶಿರಾಳಕೊಪ್ಪ ಹತ್ತಿರದ ಮಾಳಗೊಂಡನಕೊಪ್ಪದಲ್ಲಿರುವ ಅಲ್ಲಮ ಪ್ರಭುವಿಗೆ ದೀಕ್ಷೆ ಕೊಟ್ಟಂತಹ ಅನಿಮಿಷಾರಣ್ಯರ ಕ್ಷೇತ್ರದಲ್ಲಿ ನಡೆದ ಕಾರ್ತಿಕ ಮಾಸದಲ್ಲಿ ಸುಜ್ಞಾನದ ಬೆಳಕು ಕಾರ್ಯಕ್ರಮ ಸಮಾರೋಪ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಲ್ಲಮಪ್ರಭು ಮ್ಯಾಜಿಕ್ ಮಾಡಲಿಲ್ಲ: ಮಹಾನ್ ಸಾಧಕ ಅಲ್ಲಮಪ್ರಭು ಯಾವುದೇ ಯಾಂತ್ರಿಕ, ತಾಂತ್ರಿಕ ಜೀವನ ನಡೆಸಲಿಲ್ಲ. ಅವರು ಸಹಜ ಜೀವನ ನಡೆಸಿದರು. ಅವರು ಅದ್ಭುತ ಮದ್ದಳೆ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ಅವರ ಕೈಗಳಿಂದ ಹೊರಹೊಮ್ಮುತ್ತಿದ್ದ ನಾದಾನುನುಸಂಧಾನದ ಮುಖಾಂತರ ಜನರನ್ನು ತನ್ನಬಳಿ ಆಕರ್ಷಣೆ ಆಗುವಂತೆ ಮಾಡಿಕೊಂಡಿದ್ದರು ಎಂದರು.
ಅಲ್ಲಮಪ್ರಭು ಧ್ಯಾನದ ಮುಖಾಂತರ ಜಾಗೃತಿ ಮೂಡಿಸಿದ ಸ್ಥಳವಿದು, ನಮಗೆ ಅದರ ಅನುಭವ ಆಗದಿದ್ದರೆ ನಾವು ಜಾಗೃತರಾಗಿಲ್ಲ ಎಂದು ಅರ್ಥ. ಇಂತಹ ಸ್ಥಳದಲ್ಲಿ ಸಾಹಿತ್ಯ ಮತ್ತು ಶರಣರ ಸಮ್ಮೇಳನಗಳು ನಡೆಯಬೇಕು ಎಂದರು.
ಅನುಷ್ಠಾನ ಕ್ಷೇತ್ರ: ಶಿವಯೋಗ ಮಂದಿರದ ರೇವಣಸಿದ್ದ ಶ್ರೀ ಮಾತನಾಡಿ, ಯಾವುದನ್ನು ನಾವು ತಿಳಿಯದೇ ಮಾಡುತ್ತೇವೆಯೋ ಅದೇ ಜ್ಞಾನ, ಈ ಸ್ಥಳದಲ್ಲಿ ಹಲವಾರು ಮಠಾಧೀಶರು ಕೋಟಿ ಜಪ ಮಾಡಿ ಅನುಷ್ಠಾನ ಮಾಡಿದ ಕ್ಷೇತ್ರ ಇಂತಹ ಕಾರ್ಯಕ್ರಮದ ಮುಖಾಂತರ ಜನಜಾಗೃತಿ ಮೂಡಿಸಬೇಕಿದೆ ಎಂದರು.
ಅಕ್ಕೀ ಆಲೂರ ಮಠದ ಶಿವಬಸವ ಶ್ರೀ, ಮಾಜಿ ವಿಧಾನಪರಿಷತ್ ಸದಸ್ಯ ಶಾಂತವೀರಪ್ಪಗೌಡ, ಜಿಪಂ ಸದಸ್ಯ ರುದ್ರಪ್ಪ ದಾನೇರ್, ಪದ್ಮನಾಭ ಭಟ್ ಮಾತನಾಡಿದರು. ಕಾರ್ಯಕ್ರಮದ ನೇತೃತ್ವವನ್ನು ಶಿಕಾರಿಪುರ ವಿರಕ್ತಮಠದ ಚನ್ನಬಸವ ಶ್ರೀ ವಹಿಸಿದ್ದರು. ವೇದಿಕೆ ಮೇಲೆ ತೊಗರ್ಸಿ ಮಹಂತ ದೇಶಿ ಕೇಂದ್ರ ಸ್ವಾಮಿಗಳು, ಹಿರೇಮಾಗಡಿ ಶಿವಮೂರ್ತಿ ಮುರಘ ಶ್ರೀ, ಶಿರಾಳಕೊಪ್ಪದ ಸಿದ್ದೇಶ್ವರ ದೇವರು, ದಾವಣಗೆರೆ ಹಾಗು ಎನ್.ಆರ್. ಪುರ ಸ್ವಾಮಿಗಳು, ಹಾಗು ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ,ಡಾ. ಮುರಘರಾಜ್, ಜಿಪಂ ಮಾಜಿ ಅಧ್ಯಕ್ಷ ಜೆ. ಫಕ್ಕೀರಪ್ಪ ಇದ್ದರು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ ಸ್ವಾಗತಿಸಿದರು. ಕುಮಾರ್, ಸುಭಾಶ್ಚಂದ್ರ ಸ್ಥಾನಿಕ್ ಕಾರ್ಯಕ್ರಮ ನಿರೂಪಿಸಿದರು.