ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕಿ ಸಾವು
ಕ.ಪ್ರ. ವಾರ್ತೆ , ಹೊಸನಗರ , ಡಿ.6
ಟ್ರ್ಯಾಕ್ಟರ್ವೊಂದಕ್ಕೆ ಸಿಲುಕಿ 5 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೆ ಮೃತಪಟ್ಟ ಘಟನೆ ತಾಲೂಕಿನ ನಿಡಗೋಡು ಗ್ರಾಮದ ಹಳಗುಂದದ ಕಲ್ಲುಕ್ವಾರಿ ರಸ್ತೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಚನ್ನಪ್ಪ ಎಂಬವರ ಮಗಳಾದ ಸಾವಿತ್ರಿ ಮೃತಪಟ್ಟ ಬಾಲಕಿ. ಶುಕ್ರವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ದುರಂತ ಸಂಭವಿಸಿದೆ.
ಹಳಗುಂದದ ಕಲ್ಲುಕ್ವಾರಿ ಮಾರ್ಗದಲ್ಲಿ ಟ್ರ್ಯಾಕ್ಟರ್ಅನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಾಲಕಿ ಸಿಲುಕಿ ಹಾಕಿಕೊಂಡಿದ್ದು, ಅಲ್ಲೆ ಮೃತಪಟ್ಟಿದ್ದಾಳೆ. ದುರಂತದ ಸಂದರ್ಭದಲ್ಲಿ ಹೆತ್ತವರು ಅಲ್ಲೆ ಇದ್ದರು ಏನು ಮಾಡಲಾಗದ ಅಸಹಾಯಕರಂತಾಗಿದ್ದರು ಎನ್ನಲಾಗಿದೆ. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಸುರಪುರ ತಾಲೂಕಿನವರಾದ ಮೃತ ಸಾವಿತ್ರಿ ಕುಟುಂಬದವರು ಕೂಲಿಗಾಗಿ ಆಗಮಿಸಿದ್ದು, ಕೆಲವು ಸಮಯದಿಂದ ಈ ಭಾಗದಲ್ಲೆ ತಂಗಿದ್ದರು ಎನ್ನಲಾಗಿದೆ.
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತೀರ್ಥಹಳ್ಳಿ ಡಿವೈಎಸ್ಪಿ ಚನ್ನಪ್ಪ, ಸಿಪಿಐ ಬಸವರಾಜ್, ನಗರ ಪ್ರಭಾರ ಪಿಎಸ್ಐ ಬಸವರಾಜ ಗೋಣಿಗೆರೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ಬತ್ತದ ಬಣವೆಗೆ ಬೆಂಕಿ: ಅಪಾರ ನಷ್ಟ
ಸಾಗರ: ತಾಲೂಕಿನ ಅದರಂತೆ ಗ್ರಾಮದ ಕೆಳಗಿನಕೇರಿಯಲ್ಲಿನ ಮೂರು ಬತ್ತದ ಬಣವೆಗೆ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಮಾರು 80 ಕ್ವಿಂಟಾಲ್ ಬತ್ತ ಹಾಗೂ ಒಣ ಹುಲ್ಲು ಭಸ್ಮವಾಗಿದ್ದು, ಸುಮಾರು 2 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದರಾದರೂ ಬಿಸಿಲ ಝಳದಲ್ಲಿ ಬತ್ತ ಮತ್ತು ಹುಲ್ಲನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅಕ್ಕ- ಪಕ್ಕದ ಮನೆಗಳಿಗೆ ಬೆಂಕಿ ಆವರಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.
ಸ್ಥಳಕ್ಕೆ ಬಗರ್ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ತಾಪಂ ಅಧ್ಯಕ್ಷ ಗಂಟೆ ಹರೀಶ್, ಎಪಿಎಂಸಿ ಅಧ್ಯಕ್ಷ ಹೊಳೆಯಪ್ಪ, ತಹಶೀಲ್ದಾರ್ ಸಾಜಿದ್ ಅಹಮದ್ ಮುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳಿದರು.
ಕಾಗೋಡು ಅಣ್ಣಪ್ಪನವರು ನೊಂದ ರೈತರಿಗೆ 5000 ವೈಯಕ್ತಿಕ ಪರಿಹಾರ ನೀಡಿದರು.
ಚೀಟಿ ವ್ಯವಹಾರ: ಲಕ್ಷಾಂತರ ರು. 'ನಾಮ'
ಶಿವಮೊಗ್ಗ: ಚೀಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಲಕ್ಷಾಂತರ ರು. ಮೋಸ ಮಾಡಿದ ಘಟನೆ ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ಜ್ಯೋತಿ ಎಂಬುವವರು ಲಕ್ಷಾಂತರ ರು. ಮೋಸ ಮಾಡಿದ್ದು, ಇವರು ಸುಮಾರು 30 ಜನರೊಂದಿಗೆ ಚೀಟಿ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ.
ಇದೀಗ ಚೀಟಿ ಹಾಕಿದ ಜನರಿಗೆ ಹಣ ನೀಡದಿರುವುದರಿಂದ ಕಾಶಿಪುರ ಬಡಾವಣೆಯ ನಿವಾಸಿ ಭವಾನಿ ಎಂಬುವವರು ಜ್ಯೋತಿ ನಮಗೆ 4 ಲಕ್ಷ ಹಣ ಮೋಸ ಮಾಡಿದ್ದಾರೆ ಎಂದು ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.