ಮಲೆನಾಡ ಭಾಗಕ್ಕೂ 371ನೇ ವಿಧಿ ದೊರಕಲಿ: ಕುಮಾರ್ ಬಂಗಾರಪ್ಪ
ತೀರ್ಥಹಳ್ಳಿ: ಮಲೆನಾಡ ಭಾಗಕ್ಕೂ 371ನೇ ವಿಧಿ ದೊರಕಬೇಕು. ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಇದು ಅಗತ್ಯ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಹೇಳಿದರು.
ತೀರ್ಥಹಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರೊಡನೆ ಚಿಂತನ-ಮಂಥನ ನಡೆಸಲು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಣ್ಯಕ್ಕೆ ಸಂಬಂಧಪಟ್ಟಂತೆ ಕಸ್ತೂರಿ ರಂಗನ್ ವರದಿ ಈ ಭಾಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಅಡಕೆ ಬೆಳೆಗಾರರಿಗೆ ಅನುಕೂಲಕ್ಕೆ ಒದಗಬಹುದಾಗಿದ್ದ ಗೋರಕ್ ಸಿಂಗ್ ವರದಿ ಕೂಡ ಮಲೆನಾಡು ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಒದಗಿಬಂದಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದ ಕಾಲದಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು, ಅಭಿವೃದ್ಧಿ ಯಡಿಯೂರಪ್ಪ ಮತ್ತು ರಾಘವೇಂದ್ರ ಅವರಲ್ಲೇ ಕೇಂದ್ರೀಕರಿಸಿಕೊಂಡಿತ್ತು ಎಂದು ಹೇಳಿದರು. ಈಗ ಕಾಂಗ್ರೆಸ್ ಸರ್ಕಾರದ ಆಡಳಿತ ಪಾರದರ್ಶಕವಾಗಿದೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಪಟಮಕ್ಕಿ ಮಹಾಬಲೇಶ್, ಡಾ. ಟಿ.ಎಲ್. ಸುಂದರೇಶ್, ಜಿ.ಎಸ್. ನಾರಾಯಣ ರಾವ್, ಮಾಜಿ ಶಾಸಕ ಪಟಮಕ್ಕಿ ರತ್ನಾಕರ್ ಇದ್ದರು.