ಸಂತೆ ಮೈದಾನ ನಿರ್ಮಾಣಕ್ಕೆ 1.50 ಕೋಟಿ
ಕ.ಪ್ರ. ವಾರ್ತೆ , ಸಾಗರ , ಡಿ.6
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರನ್ನಾಗಿ ಕೆ.ಹೊಳೆಯಪ್ಪ ಅವರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದೆ. ಉಪಾಧ್ಯಕ್ಷರಾಗಿ ಕೆ.ಡಿ. ಜಿನದತ್ತ ಜೈನ್, ಸದಸ್ಯರಾಗಿ ಬಿ.ಸಿ. ಲಕ್ಷ್ಮೀನಾರಾಯಣ ಭಟ್, ಎಂ.ಸಿ. ಪರಶುರಾಮಪ್ಪ, ಬಸವರಾಜಪ್ಪ, ರಾಮಪ್ಪ ಬಾಳೆಗುಂಡಿ, ಟಿ.ಕೆ. ಕೃಷ್ಣಪ್ಪ ತ್ಯಾಗರ್ತಿ, ಕೆ.ಗಣಪತಿ ಹೆನಗೆರೆ, ಮಾದಪ್ಪ ಗೆಣಸಿನಕುಣಿ, ನಾರಾಯಣಪ್ಪ ಗೋಳಗೋಡು, ಮಮತಾ ಮುಂಬಾಳು, ವೀರೇಶ್ ಗೌಡ, ಕೆ.ಎಂ. ಸೂರ್ಯನಾರಾಯಣ, ಕೆ.ಬಸವರಾಜಪ್ಪ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಅಧಿಕಾರ ಸ್ವೀಕಾರ: ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಕೆ.ಹೊಳೆಯಪ್ಪ, ಪಟ್ಟಣದಲ್ಲಿ ಸಂತೆ ಮೈದಾನ ನಿರ್ಮಾಣಕ್ಕೆ 1.50 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ದಿಸೆಯಲ್ಲಿ ಗಣಪತಿ ಕೆರೆ ಪಕ್ಕದಲ್ಲಿರುವ ಜಾಗ ಕೊಡುವಂತೆ ಈಗಾಗಲೆ ನಗರಸಭೆಯೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಹೇಳಿದರು.
ಮಾರುಕಟ್ಟೆ ಪ್ರಾಂಗಣದಲ್ಲಿ ಬತ್ತ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಬತ್ತ ಹಾಗೂ ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದು, ರೈತರ ನೆರವಿಗಾಗಿ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ರೈತರು ಬತ್ತ ಖರೀದಿ ಕೇಂದ್ರದಲ್ಲಿಯೆ ಮಾರಾಟ ಮಾಡಬೇಕು. ಬತ್ತ ಮಾರಾಟ ಮಾಡಿದ ರೈತರಿಗೆ ಒಂದು ವಾರದೊಳಗೆ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಾರುಕಟ್ಟೆ ಗಮನಕ್ಕೆ ಬಾರದೆ ಅಡಕೆ ಮಾರಾಟವಾಗುತ್ತಿರುವುದರಿಂದ ಎಪಿಎಂಸಿ ಹೆಚ್ಚು ನಷ್ಟ ಅನುಭವಿಸುವಂತೆ ಆಗಿದೆ. ರೈತರನ್ನು ವಂಚಿಸುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಮನೆಬಾಗಿಲಿನಲ್ಲಿ ಅಡಕೆ ಖರೀದಿ ಮಾಡುತ್ತೇವೆ, ಹೆಚ್ಚಿನ ಬೆಲೆ ಕೊಡುತ್ತೇವೆ ಎಂದು ತೂಕದಲ್ಲಿ ಮೋಸ ಮಾಡುವ ದಲ್ಲಾಳಿಗಳ ಬಗ್ಗೆ ಬೆಳೆಗಾರರು ಎಚ್ಚರದಿಂದ ಇರಬೇಕು.
ಬೆಳೆ ಮಾರುಕಟ್ಟೆಗೆ ತಂದು ಮಾರಾಟ ಮಾಡುವುದರಿಂದ ರೈತರು ಮೋಸಗೊಳ್ಳುವ ಸಂಭವ ಇರುವುದಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಜಿಪಂ ಸದಸ್ಯ ರತ್ನಾಕರ ಹೊನಗೋಡು, ತಾಪಂ ಅಧ್ಯಕ್ಷ ಹರೀಶ್ ಗಂಟೆ, ಬಗರ್ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ಮಲ್ಲಿಕಾರ್ಜುನ ಹಕ್ರೆ ಇನ್ನಿತರರು ಹಾಜರಿದ್ದರು.